ದೆಹಲಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಚೊಚ್ಚಲ ಸಂಪುಟ ರಚನೆಗೆ ಕ್ಷಣಗಣನೆ ಆರಂಭವಾಗಿದೆ. ಒಂದೆಡೆ ಸಂಪುಟ ರಚನೆಗೆ ಸಿಎಂ ಕಸರತ್ತು ನಡೆಸಿದರೆ ಇನ್ನೊಂದೆಡೆ ಸಚಿವಾಕಾಂಕ್ಷಿಗಳು ಭರ್ಜರಿ ಲಾಭಿಯಲ್ಲಿ ತೊಡಗಿದ್ದಾರೆ.
ಈ ನಡುವೆ, ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸೋಮವಾರ ವರಿಷ್ಠರನ್ನು ಭೇಟಿ ಮಾಡಿ 3 ಪಟ್ಟಿಯನ್ನು ನೀಡಿದ್ದಾರೆ. ಈ ಕುರಿತಂತೆ ಹೈಕಮಾಂಡ್ ಪರಿಶೀಲನೆ ನಡೆಸಿ ಮಂಗಳವಾರ ಸಂಜೆ ಸಚಿವರಾಗುವವರ ಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆಯನ್ನು ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಕಳೆದ ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಬೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ರಾಜ್ಯ ಸಚಿವ ಸಂಪುಟದ ಅಂತಿಮ ಪಟ್ಟಿಯನ್ನು ಮಂಗಳವಾರ ರಾತ್ರಿಯೊಳಗೆ ಹೈಕಮಾಂಡ್ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದರು.
ರಾಜ್ಯದಲ್ಲಿನ ಪರಿಸ್ಥಿತಿಯನ್ನು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಸೂಕ್ತವಾದ ರೀತಿಯಲ್ಲಿ ಸಂಪುಟ ವರಿಷ್ಠರು ಅನೇಕ ಸಲಹೆ, ಸೂಚನೆಗಳನ್ನು ನೀಡಿದ್ದಾರೆ ಎಂದರು. ಡಿಸಿಎಂ ಸ್ಥಾನದ ಪ್ರಕಟಣೆ ಕೂಡಾ ಅವರೇ ಮಾಡಲಿದ್ದಾರೆ. ವಲಸಿಗರು, ಮೂಲ ಎಂಬುದನ್ನು ಪರಿಗಣಿಸುತ್ತಿಲ್ಲ ಎಂದು ಅವರು ಹೇಳಿದರು.






















































