ದೆಹಲಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಚೊಚ್ಚಲ ಸಂಪುಟ ರಚನೆಗೆ ಭರ್ಜರಿ ಕಸರತ್ತು ಸಾಗಿದೆ. ಒಂದೆಡೆ ಸಂಪುಟ ರಚನೆಗೆ ಸಿಎಂ ಕಸರತ್ತು ನಡೆಸಿದರೆ ಇನ್ನೊಂದೆಡೆ ಸಚಿವಾಕಾಂಕ್ಷಿಗಳು ಭರ್ಜರಿ ಲಾಭಿಯಲ್ಲಿ ತೊಡಗಿದ್ದಾರೆ.
ಈ ನಡುವೆ, ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸೋಮವಾರ ವರಿಷ್ಠರನ್ನು ಭೇಟಿ ಮಾಡಿ 3 ಪಟ್ಟಿಯನ್ನು ನೀಡಿದ್ದಾರೆ. ಈ ಕುರಿತಂತೆ ಹೈಕಮಾಂಡ್ ಪರಿಶೀಲನೆ ನಡೆಸಿ ಮಂಗಳವಾರ ಸಂಜೆ ಸಚಿವರಾಗುವವರ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಗಳಿವೆ.
ಈ ನಡುವೆ, ದಿಲ್ಲಿಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಾಲು ಸಾಲಾಗಿ ಮುಖಂಡರನ್ನು ಭೇಟಿಯಾಗಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಸಿಎಂ ಆಯ್ಕೆ ಸಂದರ್ಭದಲ್ಲಿ ರಾಜ್ಯಕ್ಕೆ ವೀಕ್ಷಕರಾಗಿ ಆಗಮಿಸಿದ್ದ ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಇನ್ನೊಂದೆಡೆ, ಸಚಿವಾಕಾಂಕ್ಷಿಗಳು ಭರ್ಜರಿ ಲಾಬಿಯಲ್ಲಿ ತೊಡಗಿದ್ದಾರೆ. ಕೆಲವರು ಸಂಪುಟದಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಅದರಲ್ಲೂ ಸಿಡಿ ಗುಮ್ಮಾ ಕಾಡುತ್ತಿರುವವರಿಗೆ ಅತಿಯಾದ ಆತಂಕ ಎದುರಾಗಿದೆ. ಇದೇ ಸಂದರ್ಭದಲ್ಲಿ ಹೊಸ ಮುಖಗಳ ಸೇರ್ಪಡೆ ಸಾಧ್ಯತೆಗಳ ಮಾತುಗಳು ಹರಿದಾಡುತ್ತಿರುವುದರಿಂದ ಹಲವರಲ್ಲಿ ನಿರೀಕ್ಷೆ ಹೆಚ್ಚಿದೆ.