ಮಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರ ಚೊಚ್ಚಲ ಸಂಪುಟದಲ್ಲಿ ಯಾರಿಗೆಲ್ಲಾ ಸ್ಥಾನ ಸಿಗಬಹುದು ಎಂಬುದೇ ಎಲ್ಲರ ಕುತೂಹಲ.
ಆಡಳಿತಾರೂಢ ಪಕ್ಷ ಬಿಜೆಪಿ ಶಾಸಕಾಂಗಕ್ಕೆ ಶಕ್ತಿ ತುಂಬಿದ್ದೇ ಕರಾವಳಿಯ ಶಾಸಕರು. ಮಂಗಳೂರು (ಯು.ಟಿ.ಖಾದರ್) ಹೊರತುಪಡಿಸಿ, ದಕ್ಷಿಣ ಕನ್ನಡದ ಉಳಿದೆಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರೇ ಗೆದ್ದರಿದ್ದಾರೆ. ಉಡುಪಿ ಜಿಲ್ಲೆಯಲ್ಲೂ ಕಾಂಗ್ರೆಸ್ ಮುಕ್ತದ ಹೆಜ್ಜೆ ಇಟ್ಟಿದ್ದೂ ಕಮಲ ಶಾಸಕರು. ಹಾಗಾಗಿ ಈ ಜಿಲ್ಲೆಗಳಿಗೆ ಈ ಬಾರಿ ಪ್ರಾತಿನಿಧ್ಯ ನೀಡಬೇಕೆಂಬುದು ಈ ಭಾಗದ ಜನರ ಆಗ್ರಹ.
ಈ ಬಾರಿ ಬೊಮ್ಮಾಯಿ ಮಂತ್ರಿಮಂಡಲದಲ್ಲಿ ಯಾರಿಗೆ ಸ್ಥಾನ ಸಿಗಬಹುದು ಎಂಬುದೇ ಕುತೂಹಲ.
ಕೋಟಾ ಶ್ರೀನಿವಾಸ ಪೂಜಾರಿ, ಅಂಗಾರ, ಭರತ್ ಶೆಟ್ಟಿ, ಸುನಿಲ್ ಕುಮಾರ್, ಲಾಲಾಜಿ ಮೆಂಡನ್, ಹಾಲಾಡಿ ಶ್ರೀನಿವಾಸ ಶೆಟ್ಟಿ ಹೆಸರುಗಳು ಸಚಿವ ಸ್ಥಾನಕ್ಕಾಗಿ ಕೇಳಿಬರುತ್ತಿದೆ. ಆದರೆ ಅಂತಿಮ ಪಟ್ಟಿಯಲ್ಲಿ ಯಾರಿಗೆ ಗದ್ದುಗೆ ಒಲಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಭರತ್ ಶೆಟ್ಟಿಗೆ ಬಿ.ಎಲ್.ಸಂತೋಷ್ ಅವರ ಕೃಪೆ ಇದೆ ಎಂದು ಹೇಳಲಾಗುತ್ತಿದ್ದು, ಇನ್ನುಳಿದವರು ಹೆಚ್ಚಿನ ಬಾರಿ ಗೆದ್ದವರು.
ಜಾತಿ ಸಮೀಕರಣ..
ಜಾತಿ ಸಮೀಕರಣದ ಆದಾರದಲ್ಲಿ ಅಲೆದು ತೂಗಿದಾಗ ಹಿರಿಯ ಶಾಸಕರಾದ ಹಾಲಾಡಿ, ಕೋಟಾ, ಲಾಲಾಜಿ, ಸುನಿಲ್‌ಗೆ ಮಂತ್ರಿ ಸ್ಥಾನ ಸಿಗಲೇಬೇಕಿದೆ. ಈ ಪೈಕಿ ಕಾರ್ಕಳ ಶಾಸಕ ಸುನಿಲ್ ಕುಮಾರ್‌ಗೆ ಸಚಿವ ಸ್ಥಾನ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತಿದೆ. ಹಾಗಾಗಿ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಮಂತ್ರಿ ಸ್ಥಾನ ತಪ್ಪಿಹೋಗುತ್ತಾ ಎಂಬ ಆತಂಕ ಬೆಂಬಲಿಗರದ್ದು. ಕೋಟಾ ಶ್ರೀನಿವಾಸ ಪೂಜಾರಿಗೂ ಮಂತ್ರಿ ಸ್ಥಾನ ನೀಡಿದರೆ ಉಡುಪಿ ಜಿಲ್ಲೆಯಲ್ಲಿ ಒಂದೇ ಸಮುದಾಯದ ಇಬ್ಬರಿಗೆ ಹುದ್ದೆ ಸಿಕ್ಕಿದಂತಾಗುತ್ತದೆ. ಆದರೆ ಕೋಟಾ ಅವರು ಉಭಯ ಜಿಲ್ಲೆಗಳ ವ್ತಾಪ್ತಿಯನ್ನು ಒಳಗೊಂಡಿರುವ ವಿಧಾನಪರಿಷತ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವುದರಿಂದ ಈ ಸಮಸ್ಯೆ ಉಂಟಾಗದು ಎಂಬುದು ಹಲವರ ಅಭಿಪ್ರಾಯ. ಅಷ್ಟೇ ಅಲ್ಲ, ಕರಾವಳಿಯ ಮೂರು ಜಿಲ್ಲೆಗಳು ಹಾಗೂ ಮಲೆನಾಡಿನಲ್ಲೂ ಬಿಲ್ಲವ ಸಮುದಾಯದ ಜನರು ಹೆಚ್ಚಿರುವುದರಿಂದ ಈ ಸಮುದಾಯಕ್ಕೆ ಪ್ರಾಮುಖ್ಯತೆ ನೀಡುವ ಸಾಧ್ಯತೆಗಳೇ ಹೆಚ್ಚು.
ಇನ್ನೊಂದೆಡೆ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಮಂತ್ರಿಗಿರಿ ಲಭಿಸಿದರೆ ಭರತ್ ಶೆಟ್ಟಿಗೆ ಅವಕಾಶ ಸಿಗದು. ಒಂದು ವೇಳೆ ಭರತ್ ಶೆಟ್ಟಿ ಮಿನಿಸ್ಟರ್ ಆದರೆ ಅತ್ತ ಉಡುಪಿ ಜಿಲ್ಲೆಯ ಲಾಲಾಜಿ ಮೆಂಡನ್ ಅವರಿಗೆ ಸಂಪುಟ ಸೇರಲು ಹಾದಿ ಸುಗಮವಾಗುತ್ತದೆ.
ಈ ಮಧ್ಯೆ, ದಲಿತರಿಗೆ ನೀಡುವ ಮಂತ್ರಿಸ್ಥಾನ ವಿಚಾರದಲ್ಲಿ ಇಡೀ ರಾಜ್ಯವನ್ನೇ ಪರಿಗಣಿಸಲಾಗುತ್ತದೆ. ಬಹುಪಾಲು ದಲಿತ ಶಾಸಕರು ಸಂಪುಟ ಸೇರಲಿರುವುದರಿಂದ ಈ ಬಾರಿ ಅಂಗಾರ ಅವರಿಗೆ ಅಗ್ನಿ ಪರೀಕ್ಷೆಯ ಸನ್ನಿವೇಶ ಎದುರಾಗಿದೆ.