ದೆಹಲಿ: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಸಾಧ್ಯತೆಗಳ ಬಗ್ಗೆ ರಾಜ್ಯ ರಾಜಕೀಯದಲ್ಲಿ ಚರ್ಚೆ ಸಾಗಿರುವಾಗಲೇ ದೆಹಲಿಯಲ್ಲೂ ವಿದ್ಯಮಾನಗಳು ಗರಿಗೆದರಿವೆ. ‘ಸದ್ಯದ ಮಟ್ಟಿಗೆ ಕೊರೋನಾ ಸೋಂಕಿನ ಅಬ್ಬರವನ್ನು ತಣ್ಣಗಾಗಿಸಬೇಕಿದೆ. ಹಾಗಾಗಿ ಪಕ್ಷದ ಗಮನ ಕೋವಿಡ್ ನಿಯಂತ್ರಣದತ್ತ’ ಎಂಬ ಸಂದೇಶವು ಸದ್ಯಕ್ಕೆ ಬಿಎಸ್‌ವೈ ಸೇಫ್ ಎಂಬುದನ್ನು ಬಿಂಬಿಸುವಂತಿದೆ.
ಯಡಿಯೂರಪ್ಪ ಸಂಪುಟ ಸಹೋದ್ಯೋಗಿಗಳು ದೆಹಲಿ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ಇಂಥದ್ದೊಂದು ಸಂದೇಶ ರವಾನೆಯಾಗಿದೆ. ನಾಯಕತ್ವ ಬದಲಾವಣೆ ಚರ್ಚೆಯ ಸಂದರ್ಭದಲ್ಲೇ ಸಚಿವ ಸಿ.ಪಿ. ಯೋಗೇಶ್ವರ್, ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರು ದೆಹಲಿಗೆ ದೌಡಾಯಿಸಿದ್ದರು. ಆದರೆ ಹೈಕಮಾಂಡ್ ಭೇಟಿ ಸಾಧ್ಯವಾಗಿಲ್ಲ. ಸಚಿವ ಮುರುಗೇಶ್ ನಿರಾಣಿ ಅವರೂ ದೆಹಲಿ ಭೇಟಿಗೆ ಕಸರತ್ತು ನಡೆಸಿದ್ದರು. ಅವರಿಗೂ ಹೈಕಮಾಂಡ್ ಭೇಟಿ ಅವಕಾಶ ಸಿಕ್ಕಿಲ್ಲ ಎನ್ನಲಾಗಿದೆ. ಇದೆಲ್ಲದರ ನಡುವೆ, ನಾಯಕತ್ವ ಬದಲಾವಣೆ ವಿಚಾರ ಕುರಿತಂತೆ ಯಾರೂ ದೆಹಲಿಗೆ ಬರಬೇಡಿ, ಸ್ಥಳೀಯ ಸಮಸ್ಯೆಗಳಿದ್ದರೆ ರಾಜ್ಯ ನಾಯಕರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಬಿಎಸ್‌ವೈ ಗರಂ:
ಯೋಗೇಶ್ವರ್, ಬೆಲ್ಲದ್ ಅವರ ದೆಹಲಿ ಭೇಟಿ ಕುರಿತಂತೆ ಬೆಂಗಳೂರಿನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ ಸಿಎಂ ಯಡಿಯೂರಪ್ಪ, ನಮ್ಮ ಮುಂದೆ ಇರೋದು ಕೋವಿಡ್ ನಿರ್ವಹಣೆ. ದೆಹಲಿಗೆ ಯಾರು ಹೋಗಿ ಬಂದರೋ, ಅದು ನನಗೆ ಗೊತ್ತಿಲ್ಲ ಎಂದರು. ಯಾರೋ ಎಲ್ಲಿಗೋ ಹೋಗಿ ಬಂದರು ಅಂದರೆ, ಅವರಿಗೆ ಉತ್ತರ ಕೊಟ್ಟು ಕಳಿಸಿದಾರಲ್ಲ ಎಂಬ ಸಿಎಂ ಪ್ರತಿಕ್ರಿಯೆಯ ದಾಟಿಯು ಅವರಿಗೆ ಹೈ ಅಭಯ ಸಿಕ್ಕಿದೆ ಎಂಬುದನ್ನು ಬಿಂಬಿಸಿದಂತಿತ್ತು.
ಶಾಸಕಾಂಗ ಸಭೆ ವಿಚಾರ ಕುರಿತಾಗಿಯೂ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಅದು ನಿಮ್ಮ ಮುಂದೆ ಹೇಳೋ ವಿಚಾರವಲ್ಲ ಎಂದು ಪರೋಕ್ಷವಾಗಿ ಸಚಿವ ಸಿ.ಪಿ.ಯೋಗೇಶ್ವರ್ಗೆ ಸಿಎಂ ತಿರುಗೇಟು ಕೊಟ್ಟಿದ್ದಾರೆ.