ನಂದೂರು ಕೈಗಾರಿಕಾ ಪ್ರದೇಶದಲ್ಲಿರುವ ವಿಜಯ ಆಕ್ಸಿಜನ್ ಇಂಡಸ್ಟ್ರಿ ಘಟಕದಿಂದ ಮಾರಾಟ ಯತ್ನ. ಮಹಾರಾಷ್ಟ್ರ, ತೆಲಂಗಾಣಕ್ಕೆ ಅಕ್ರಮವಾಗಿ ವೈದ್ಯಕೀಯ ಆಮ್ಲಜನಕ ಪೂರೈಕೆ.. ಕಲಬುರಗಿ ಜಿಲ್ಲೆಯ ಗಡಿಭಾಗಗಳಲ್ಲಿ ಚಕ್ ಪೋಸ್ಟ್ ಬಿಗಿಗೊಳಿಸಲು ಅಧಿಕಾರಿಗಳಿಗೆ ಸಚಿವ ನಿರಾಣಿ ಸೂಚನೆ..
ಕಲಬುರಗಿ-ರಾಜ್ಯಕ್ಕೆ ಪೂರೈಸಬೇಕಾದ ಆಕ್ಸಿಜನ್ ಸಿಲಿಂಡರ್ಗಳನ್ನು ಮಹಾರಾಷ್ಟ್ರ, ಮತ್ತು ತೆಲಂಗಾಣ ರಾಜ್ಯಕ್ಕೆ ಕಾಳಸಂತೆಯಲ್ಲಿ ಮಾರುತ್ತಿದ್ದ ಆಕ್ಸಿಜನ್ ಇಂಡಸ್ಟ್ರಿ ಮೇಲೆ ಕಲಬುರಗಿ ಜಿಲ್ಲಾಡಳಿತ ದಿಢೀರ್ ದಾಳಿ ನಡೆಸಿ ಸಿಲಿಂಡರ್ ವಶಪಡಿಸಿಕೊಂಡಿರುವ ವಿದ್ಯಮಾನ ತಡರಾತ್ರಿ ನಡೆದಿದೆ.
ಎರಡು ದಿನಗಳ ಹಿಂದೆಯಷ್ಟೇ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಜಿಲ್ಲಾ ಉಸ್ತುವಾರಿ ಸಚಿವರಾದ ಮುರುಗೇಶ್ ಆರ್ ನಿರಾಣಿ ಅವರು ಅಕ್ರಮಗಳ ಮೇಲೆ ನಿಗಾವಹಿಸುವಂತೆ ನಿರ್ದೇಶನ ನೀಡಿದ ಬೆನ್ನಲ್ಲೇ ಈ ದಾಳಿ ನಡೆಸಲಾಗಿದೆ. ದಾಳಿ ಸಂದರ್ಭದಲ್ಲಿ ಆಕ್ಸಿಜನ್ ತುಂಬಿದ ಕೆಲವು ಸಿಲಿಂಡರ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಕಲಬುರಗಿ ಜಿಲ್ಲೆಯ ನಂದೂರು ಕೈಗಾರಿಕಾ ಪ್ರದೇಶದಲ್ಲಿರುವ ವಿಜಯ ಆಕ್ಸಿಜನ್ ಇಂಡಸ್ಟ್ರಿ ಘಟಕದಿಂದ ನೆರೆಯ ಮಹಾರಾಷ್ಟ್ರ, ತೆಲಂಗಾಣಕ್ಕೆ ಅಕ್ರಮವಾಗಿ ವೈದ್ಯಕೀಯ ಆಮ್ಲಜನಕ ಪೂರೈಕೆಯಾಗುತ್ತಿದೆ ಎಂಬ ದೂರು ಜಿಲ್ಲಾಡಳಿತಕ್ಕೆ ಬಂದಿತ್ತು.
ಆ ಮಾಹಿತಿಯನ್ನು ಆಧರಿಸಿ ಜಿಲ್ಲಾಡಳಿತ ನಿನ್ನೆ ರಾತ್ರಿ ವಿಜಯ ಆಕ್ಸಿಜನ್ ಇಂಡಸ್ಟ್ರಿ ಮೇಲೆ ದಾಳಿ ನಡೆಸಿ ಆಕ್ರಮವನ್ನು ಬಯಲಿಗೆಳೆದಿದೆ. ಕಾಳ ಸಂತೆಯಲ್ಲಿ ಆಕ್ಸಿಜನ್ ಸಿಲಿಂಡರ್ ಮಾರಾಟ ಮಾಡುತ್ತಿದ್ದ ಕಾರಣಕ್ಕೆ ಇಂಡಸ್ಟ್ರಿಯನ್ನು ವಶಕ್ಕೆ ಪಡೆದಿದೆ. ಎಸಿ ರಾಮಚಂದ್ರ ಗಡದೆ ಅವರ ಸಮ್ಮುಖದಲ್ಲಿ ನಡೆದ ಈ ದಾಳಿಯಿಂದಾಗಿ ಅಕ್ರಮ ಬಯಲಿಗೆ ಬಂದಿದೆ.

ಸಚಿವರ ಎಚ್ಚರಿಕೆ
ಈ ದಾಳಿ ಕುರಿತಾಗಿ ಹೇಳಿಕೆ ನೀಡಿರುವ ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ಆರ್ ನಿರಾಣಿ ಅವರು,ಜನತೆ ಸಂಕಷ್ಟದ ಸ್ಥಿತಿಯಲ್ಲಿರುವಾಗ ಹೆಚ್ಚಿನ ಹಣದ ಆಸೆಗಾಗಿ ಯಾರೊಬ್ಬರೂ ಕೂಡ ಕಾಳಸಂತೆಯಲ್ಲಿ ಆಕ್ಸಿಜನ್ ಸಿಲಿಂಡರ್ ಗಳನ್ನು ಮಾರಾಟ ಮಾಡಬಾರದು ಎಂದು ಮನವಿ ಮಾಡಿದ್ದಾರೆ.
ಅನೇಕ ಕಡೆ ಸಕಾಲಕ್ಕೆ ಸರಿಯಾಗಿ ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಸಿಗದೆ ಸಾವು- ನೋವು ಸಂಭವಿಸಿದೆ.ಕೋವಿಡ್ ಸಂಕಷ್ಟದ ಸ್ಥಿತಿಯಲ್ಲಿ ಆಕ್ಸಿಜನ್ ತುಂಬಾ ಅತ್ಯಗತ್ಯ. ಜೀವ ಉಳಿಸುವ ಸಂಜೀವಿನಿ ಎಂದೇ ಹೇಳಲಾಗುವ ಇದನ್ನು ಕಾಳಸಂತೆಯಲ್ಲಿ ಮಾರಾಟ ಮಾಡದಂತೆ ಜನತೆಯಲ್ಲಿ ಪ್ರಾರ್ಥಿಸಿದ್ದಾರೆ. ಯಾರಾದರೂ ಹಣದ ಆಸೆಗಾಗಿ ಅಕ್ರಮವಾಗಿ ಸಿಲಿಂಡರ್ ಗಳನ್ನು ಸಂಗ್ರಹಿಸಿಕೊಂಡಿದ್ದರೆ ಕೂಡಲೇ ಜಿಲ್ಲಾಡಳಿತಕ್ಕೆ ಹಿಂದಿರುಗಿಸುವಂತೆ ಮನವಿ ಮಾಡಿದ್ದಾರೆ.
ಕಳೆದ ರಾತ್ರಿ ಪತ್ತೆಯಾದ ಸಿಲಿಂಡರ್ ಪ್ರಕರಣದಲ್ಲಿ ಎಷ್ಟೇ ಪ್ರಭಾವಿಗಳಲಿರಲಿ, ಇದರಲ್ಲಿ ಯಾರೇ ಭಾಗಿಯಾಗಿದ್ದರೂ ನಿದಾ೯ಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು
ಎಂದು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿಗಳ ಜೊತೆ ಮಾತಮಾಡಿದ್ದು, ಹೊರರಾಜ್ಯಗಳಿಗೆ ಸಂಪಕ೯ ಕಲ್ಪಿಸುವ ಚಕ್ ಪೋಸ್ಟ್ ಗಳನ್ನು ಇನ್ನಷ್ಟು ಬಿಗಿಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

























































