ಬೆಂಗಳೂರು: ಚಾಮರಾಜನಗರ ಘಟನೆ ನಂತರ ರಾಜ್ಯದ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆ ಉಂಟಾಗದಂತೆ ಸರ್ಕಾರ ಎಚ್ಚರಿಕೆ ವಹಿಸಿದೆ. ಈ ಸಂಬಂಧದ ಸಮನ್ವಯತೆ ಜವಾಬ್ದಾರಿಯನ್ನು ಸಿಎಂ ಯಡಿಯೂರಪ್ಪ ಅವರು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ವಹಿಸಿದ್ದೇ ತಡ, ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದಾರೆ.
ಇಂದು ಬೆಳಗ್ಗೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಸಚಿವ ಜಗದೀಶ್ ಶೆಟ್ಟರ್, ರಾಜ್ಯದಲ್ಲಿನ ಆಮ್ಲಜನಕ ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಿದರು. ಆಸ್ಪತ್ರೆಗಳಿಗೆ ಅಗತ್ಯ ಆಮ್ಲಜನಕ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವ ಕಸರತ್ತು ನಡೆಸಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶೆಟ್ಟರ್, ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಆಕ್ಸಿಜನ್ ಬಳಕೆಗೆ ನಮಗೆ ಅವಕಾಶ ಮಾಡಿಕೊಡಿ ಎಂದು ಕೇಂದ್ರದ ಬಳಿ ಮನವಿ ಮಾಡಿಕೊಂಡಿದ್ದೇವೆ ಎಂದರು. ಈ ಕುರಿತು ಕೇಂದ್ರ ಸಚಿವ ಪಿಯೂಶ್ ಗೊಯಲ್ ಜೊತೆ ದೂರವಾಣಿ ಮೂಲಕ ಮಾತುಕತೆ ನಡರಸಿದ್ದು, ಕೇಂದ್ರದಿಂದ ಸಕಾರಾತ್ಮಕ ಉತ್ತರ ಸಿಗುವ ನಿರೀಕ್ಷೆ ಇದೆ ಎಂದರು.
ದೇಶಕ್ಕೆ ಅರಬ್ನಿಂದ 80 ಮೆಟ್ರಿಕ್ ಟನ್ ಆಕ್ಸಿಜನ್ ಬರುಲಿದ್ದು, ಅದರಲ್ಲಿ ನಮ್ಮ ರಾಜ್ಯಕ್ಕೂ ಆಕ್ಸಿಜನ್ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಶೆಟ್ಟರ್, ಮುಂದಿನ ದಿನಗಳಲ್ಲಿ 1,500 ಟನ್ ಆಕ್ಸಿಜನ್ ರಾಜ್ಯಕ್ಕೆ ಲಭ್ಯವಾಗಲಿದೆ ಎಂದು ಹೇಳಿದರು.