ಬೆಂಗಳೂರು/ಲಂಡನ್: ಇಂಗ್ಲೆಂಡ್ನಲ್ಲಿ ನೆಲೆಸಿರುವ ಒಕ್ಕಲಿಗ ಸಮುದಾಯದವರು ಸ್ಥಾಪನೆ ಮಾಡಿರುವ ವಿಶ್ವ ಒಕ್ಕಲಿಗರ ಪರಿಷತ್ತು ಅನ್ನು ಶನಿವಾರ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಉದ್ಘಾಟನೆ ಮಾಡಿದರು.
ವರ್ಚುಯಲ್ ವೇದಿಕೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದಲೇ ಪಾಲ್ಗೊಂಡ ಅವರು, ಉದ್ಘಾಟನಾ ಸಮಾರಂಭದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಯುಗಾದಿ ಉತ್ಸವಕ್ಕೂ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಅವರು; ಇಂಗ್ಲೆಂಡ್ ಸೇರಿದಂತೆ ಜಗತ್ತಿನ ನಾನಾ ದೇಶಗಳಲ್ಲಿ ನೆಲೆಸಿರುವ ಒಕ್ಕಲಿಗ ಬಂಧುಗಳ ಸಾಧನೆಯಿಂದ ಸ್ವದೇಶದಲ್ಲಿರುವ ನಮಗೆಲ್ಲರಿಗೂ ಹೆಮ್ಮೆಯಾಗಿದೆ. ಹುಟ್ಟಿದ ನೆಲದಲ್ಲಿ ಉದ್ಯಮ ಸ್ಥಾಪಿಸುವುದೋ ಅಥವಾ ಯಾವುದಾದರೂ ಉಪಯುಕ್ತ ಯೋಜನೆ ಹಾಕಿಕೊಂಡರೆ ಸರಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.
ಕೃಷಿ ಮೂಲಕ ಅನ್ನ ನೀಡುವ ಒಕ್ಕಲಿಗರು ಎಲ್ಲರಿಗೂ ಆದರ್ಶವಾಗಿದ್ದಾರೆ. ಇಂಥ ಸಮುದಾಯದಲ್ಲೂ ಕಷ್ಟದಲ್ಲಿರುವವರು ಇದ್ದಾರೆ. ಅಂಥವರ ನೆರೆವಿಗೆ ತಾವು ಧಾವಿಸಬೇಕು ಎಂದು ಅನಿವಾಸಿ ಒಕ್ಕಲಿಗರಿಗೆ ಕರೆ ನೀಡಿದ ಡಿಸಿಎಂ, ಸಮುದಾಯವನ್ನು ಎಲ್ಲ ರೀತಿಯಲ್ಲೂ ಸಬಲೀಕರಣ ಮಾಡಬೇಕಿದೆ. ಅದಕ್ಕಾಗಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗೋಣ ಎಂದರು.
ಲಂಡನ್ನಲ್ಲಿ ವಿಶ್ವ ಒಕ್ಕಲಿಗರ ಪರಿಷತ್ತು ಸ್ಥಾಪನೆ ಅತ್ಯಂತ ಅರ್ಥಪೂರ್ಣ ಕೆಲಸವಾಗಿದೆ. ಈ ಮೂಲಕ ಭವಿಷ್ಯ ಅರಸಿಕೊಂಡು ಇಂಗ್ಲೆಂಡ್ಗೆ ಬರುವ ತಾಯ್ನಾಡಿನ ಪ್ರತಿಭೆಗಳಿಗೆ ಪರಿಷತ್ತು ನೆರವಾಗಲಿ ಎಂಬ ಆಶಯ ನನ್ನದು ಎಂದು ಡಿಸಿಎಂ ಹೇಳಿದರು.
ಬಿಜೆಪಿ ಮುಖಂಡರಾದ ಅಶ್ವತ್ಥನಾರಾಯಣ ಈ ಸಂದರ್ಭದಲ್ಲಿ ಹಾಜರಿದ್ದರು.