ಬೆಂಗಳೂರು: ಉಪಚುನಾವಣಾ ಅಖಾಡದಲ್ಲಿ ಪಕ್ಷಾಂತರ ಪರ್ವ ಮುಂದುವರಿದಿದೆ. ಬೀದರ್ ಜಿಲ್ಲೆ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ಅವರನ್ನು ಬೆಂಬಲಿಸಿ ವಿವಿಧ ಪಕ್ಷಗಳಿಂದ ಬಿಜೆಪಿ ಸೇರಿದ ಮುಖಂಡರನ್ನು ನಳಿನ್ ಕುಮಾರ್ ಸ್ವಾಗತಿಸಿದರು. ಕಾಂಗ್ರೆಸ್ ಪಕ್ಷದ ಎಸ್.ಸಿ. ಮುಖಂಡರಾದ ರವಿ ಗಾಯಕ್‍ವಾಡ್ ಮತ್ತು ಅವರ ಬೆಂಬಲಿಗರು, ಟೋಕರಿ ಕೋಳಿ ಸಮಾಜದ ತಾಲ್ಲೂಕಿನ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡರು. ಸಂಸದರಾದ ಶ್ರೀ ಭಗವಂತ ಖೂಬಾ, ಸಚಿವರಾದ ಶ್ರೀ ಪ್ರಭು ಚೌಹಾಣ್, ರಾಜ್ಯ ಎಸ್.ಸಿ. ಮೋರ್ಚಾ ಅಧ್ಯಕ್ಷರಾದ ಶ್ರೀ ಛಲವಾದಿ ನಾರಾಯಣಸ್ವಾಮಿ, ಪಕ್ಷದ ಜಿಲ್ಲಾಧ್ಯಕ್ಷರಾದ ಶ್ರೀ ಶಿವಾನಂದ ಮಂಟಾಳ್ಕರ್, ಅಭ್ಯರ್ಥಿ ಶ್ರೀ ಶರಣು ಸಲಗರ್, ಪಕ್ಷದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ದೇಶದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ರಾಜ್ಯದ ಬೆಳಗಾವಿ ಲೋಕಸಭಾ ಕ್ಷೇತ್ರ, ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೈದರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡುವ ಜೊತೆಗೆ ಈ ಭಾಗದ ಅಭಿವೃದ್ಧಿಗೆ ಗರಿಷ್ಠ ಅನುದಾನವನ್ನು ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರಕಾರವು ಕೋವಿಡ್ ಸಂಕಷ್ಟವನ್ನು ಯಶಸ್ವಿಯಾಗಿ ನಿಭಾಯಿಸಿದೆ. ಅಲ್ಲದೆ, ಅತ್ಯುತ್ತಮ ಬಜೆಟ್ ನೀಡಿದೆ ಎಂದು ಅವರು ಶ್ಲಾಘಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯುತ್ತಮ ಜನಪರ ಕಾರ್ಯಗಳನ್ನು ಜನರು ಬೆಂಬಲಿಸುತ್ತಿದ್ದಾರೆ ಎಂದ ಅವರು ನರೇಂದ್ರ ಮೋದಿ ಅವರ ಸರಕಾರವು ಜನಧನ್ ಖಾತೆಗಳ ಮೂಲಕ ಬಡ ಮಹಿಳೆಯರ ಸಶಕ್ತೀಕರಣ, ಶೌಚಾಲಯದ ಸಮಸ್ಯೆ ಇರುವ ಉತ್ತರ ಕರ್ನಾಟಕದ ಮಹಿಳೆಯರ ಸಮಸ್ಯೆ ನಿವಾರಣೆ ಮಾಡಿದೆ. ಉಜ್ವಲ ಯೋಜನೆ ಮೂಲಕ ಸಿಲಿಂಡರ್ ಒದಗಿಸುವ ಕಾರ್ಯ, ಆಯುಷ್ಮಾನ್ ಯೋಜನೆ ಮೂಲಕ ಬಡವರಿಗೆ ವಿಮೆ ಒದಗಿಸುವ ಸತ್ಕಾರ್ಯ ಮಾಡಿದ್ದಲ್ಲದೆ, ಕೋವಿಡ್ ಸಂದರ್ಭದಲ್ಲಿ ಮನೆ ಮನೆಗಳಿಗೆ ಆಹಾರ ಧಾನ್ಯ ಒದಗಿಸಿತ್ತು. ಈ ಎಲ್ಲಾ ಅತ್ಯುತ್ತಮ ಜನಪರ ಯೋಜನೆಗಳನ್ನು ಗಮನಿಸಿ ಮತದಾರರು ಬಿಜೆಪಿಯನ್ನು ನಿರಂತರವಾಗಿ ಬೆಂಬಲಿಸಿದ್ದಾರೆ. ಮುಂದೆಯೂ ಬೆಂಬಲಿಸಲಿದ್ದಾರೆ ಎಂದರು.
ಡಿಕೆಶಿ ಮುಖವನ್ನು ಸಿದ್ದರಾಮಯ್ಯ ಅವರು ನೋಡುತ್ತಿಲ್ಲ. ಸಿದ್ದರಾಮಯ್ಯ ಮುಖವನ್ನು ಡಿಕೆ ಶಿವಕುಮಾರ್ ನೋಡುತ್ತಿಲ್ಲ. ಕಾಂಗ್ರೆಸ್ ಒಳಜಗಳ ಬೀದಿ ಜಗಳವಾಗಿ ಪರಿವರ್ತನೆಗೊಂಡಿದೆ. ಜೆಡಿಎಸ್ ರಾಜ್ಯದಲ್ಲಿ ಕಳೆದು ಹೋಗಿದೆ. ಕಾಂಗ್ರೆಸ್ ಪಕ್ಷವು ಒಳಜಗಳದಿಂದಾಗಿ ನೆಲೆ ಕಳೆದುಕೊಳ್ಳಲಿದೆ ಎಂದು ನಳಿನ್ ಕುಮಾರ್ ವಿಶ್ಲೇಷಿಸಿದರು.
ಕಾಂಗ್ರೆಸ್ ಪಕ್ಷದ ಮನೆ ಖಾಲಿಯಾಗಿದೆ. ಭಾರತೀಯ ಜನತಾ ಪಕ್ಷದ ಹಡಗು ತುಂಬುತ್ತಿದೆ. ಸಿದ್ದರಾಮಯ್ಯ ಅವರು ಅಧಿಕಾರದ ಗದ್ದುಗೆಗೆ ಏರಲು “ಅಹಿಂದ”ವನ್ನು ಬಳಸಿಕೊಂಡರು. ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ಪಕ್ಷದ ಮುಖಂಡರು ದಲಿತರಿಗೆ ನ್ಯಾಯವನ್ನು ಒದಗಿಸಿಲ್ಲ. ದಲಿತ ಮುಖಂಡರನ್ನು ಅಧಿಕಾರ ಪಡೆಯಲು ಮಾತ್ರ ಬಳಸಿಕೊಂಡಿದೆ ಎಂದರು.
ಕಾಂಗ್ರೆಸ್ ಪಕ್ಷವು ಕೇವಲ ಡಾ|| ಪರಮೇಶ್ವರ್ ಅವರನ್ನು ಸೋಲಿಸಿದ್ದಲ್ಲ; ಅದು ಡಾ|| ಬಿ.ಆರ್. ಅಂಬೇಡ್ಕರ್ ಅವರಿಗೂ ಅನ್ಯಾಯ ಮಾಡಿದೆ. ಸಂವಿಧಾನ ಶಿಲ್ಪಿ ಡಾ|| ಅಂಬೇಡ್ಕರ್ ಅವರ ಪ್ರಾಣ ತ್ಯಾಗ ಆದಾಗ ಅವರ ಶವ ಸಂಸ್ಕಾರಕ್ಕೆ ದೆಹಲಿಯಲ್ಲಿ ಜಾಗ ನೀಡದೆ ಅನ್ಯಾಯ ಮಾಡಿದೆ. ಲೋಕಸಭಾ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸಿದಾಗ ಅವರ ಸೋಲಿಗೆ ಕಾರಣವಾಗಿತ್ತು ಎಂದು ವಿವರಿಸಿದರು.
ದಲಿತ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಾಕಿಸಿದ ಕಾಂಗ್ರೆಸಿಗರು ಶಾಸಕರ ಮನೆಗೆ ಬೆಂಕಿ ಹಾಕಿದ ಸಂಪತ್‍ರಾಜ್‍ನನ್ನು ಈ ವರೆಗೆ ಉಚ್ಚಾಟನೆ ಮಾಡಿಲ್ಲ. ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ನ್ಯಾಯ ಕೊಟ್ಟಿಲ್ಲ, ಕಾಂಗ್ರೆಸ್‍ಗೆ ಬಿ.ಆರ್. ಅಂಬೇಡ್ಕರ್ ಅವರ ಶಾಪ ಇದೆ. ಬಿ.ಆರ್. ಅಂಬೇಡ್ಕರ್ ಅವರಿಗೆ ಗೌರವ ನೀಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಮಾಡಿದೆ ಎಂದು ನಳಿನ್ ಕುಮಾರ್ ಹೇಳಿದರು.