ದೊಡ್ಡಬಳ್ಳಾಪುರ: ಕುಡಿಯುವ ನೀರಿನ ಸಮಸ್ಯೆ ನೀಗಿಸುವಂತೆ ಒತ್ತಾಯಿಸಿ ಕೆಸ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಳಿಪೂಜೆ ಗ್ರಾಮದ ಮಹಿಳೆಯರು ಖಾಲಿ ಬಿಂದಿಗೆಗಳೊಂದಿಗೆ ತಾಲೂಕು ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಟಿ.ವೆಂಕಟರಮಣಯ್ಯ ಹಾಗೂ ತಾಪಂ ಅಧ್ಯಕ್ಷ ನಾರಾಯಣಗೌಡ, ತಾ.ಪಂ ಸದಸ್ಯರಾದ ಡಿಸಿ ಶಶಿಧರ್, ನಾರಾಯಣಗೌಡ ಗ್ರಾಮಸ್ಥರ ಸಮಸ್ಯೆ ಆಲಿಸಿದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಾವುದೇ ಅನುದಾನ ನೀಡದೆ ಕಡೆಗಣಿಸಿದೆ. ಕನಿಷ್ಠ ಮೂಲಭೂತ ಸೌಲಭ್ಯವಾದ ನೀರನ್ನು ಕೊಡಿ ಬೇಸಿಗೆಯಲ್ಲಿ ಪರಿಸ್ಥಿತಿ ತೀವ್ರವಾಗಿದೆ ಎಂದು ಸದನದಲ್ಲಿ ಪ್ರಶ್ನಿಸಿದಾಗ 85 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಆದರೆ ತಾಲೂಕಿನ 123 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು, ಸರ್ಕಾರ ನೀಡಿರುವ ಅನುದಾನದಲ್ಲಿ ಕೇವಲ 26 ರಿಂದ 27 ಗ್ರಾಮಗಳಿಗೆ ಕೊಳವೆ ಬಾವಿ ಕೊರೆಸಲು ಮಾತ್ರ ಸಾಧ್ಯವಿದೆ. ಉಳಿದ ಗ್ರಾಮಗಳಿಗೆ ನೀರು ಸಮಸ್ಯೆ ಬಗೆ ಹರಿಸಲು ಸಾಧ್ಯವಾಗುತ್ತಿಲ್ಲ, ಕೂಡಲೇ ನೀರಿನ ಸಮಸ್ಯೆ ನೀಗಲು ಅನುದಾನ ನೀಡಬೇಕು ಇಲ್ಲವೆ ಗ್ರಾಮೀಣಾಭಿವೃದ್ಧಿ ಸಚಿವರು ರಾಜೀನಾಮೆ ನೀಡಬೇಕೆಂದು ಶಾಸಕ ಟಿ.ವೆಂಕಟರಮಣಯ್ಯ ಒತ್ತಾಯಿಸಿದರು.
ತಾ.ಪಂ. ಅಧ್ಯಕ್ಷ ನಾರಾಯಣಗೌಡ ಮಾತನಾಡಿ ಸರ್ಕಾರ ಅನುದಾನ ನೀಡಿದರೆ ಸಮಸ್ಯೆ ಬಗೆ ಹರಿಸಲು ಸಾಧ್ಯವಿದೆ, ಇಲ್ಲವಾದರೆ ತಾಲೂಕು ಏನು ಮಾಡಲು ಸಾಧ್ಯ. ಇದೇ ಸ್ಥಿತಿ ಮುಂದಾದರೆ ಉಳಿದ ಗ್ರಾಮಗಳ ಜನತೆ ಇದೇ ರೀತಿ ಬಂದು ಪ್ರತಿಭಟನೆಗೆ ಮುಂದಾಗುತ್ತಾರೆ. 15ನೇ ಹಣಕಾಸು ಯೋಜನೆಯಡಿ ಬೋರ್ವೆಲ್ ಕೊರೆಸಿ ಎಂದು ಜಿಪಂ ಸಿಇಒ ಹೇಳುತ್ತಾರೆ. ಆದರೆ ತಾ.ಪಂ. ಇ.ಒ. ಮತ್ತು ಎಇಒ ಆ ಯೋಜನೆಯಡಿ ಬಳಸಲು ಸಾಧ್ಯವಿಲ್ಲ ಎನ್ನುತ್ತಾರೆ, ಜನಪ್ರತಿನಿದಿಗಳಾದ ನಾವು ಜನರಿಗೆ ಏನು ಹೇಳಬೇಕು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಾ.ಪಂ. ಇ.ಒ. ಮುರುಡಯ್ಯ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇ.ಒ.ಯೋಗೀಶ್ ಅವರನ್ನು ಸ್ಥಳಕ್ಕೆ ಕರೆಸಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಈಗಾಗಲೇ ಗಾಳಿಪೂಜೆ ಗ್ರಾಮದಲ್ಲಿ ಒಂದು ಬೋರ್ ವೆಲ್ ಕಾರ್ಯ ನಿರ್ವಹಿಸುತ್ತಿದ್ದು, ಟ್ಯಾಂಕರ್ ಮೂಲಕವೂ ನೀರನ್ನು ಪೂರೈಸಲಾಗುತ್ತಿದೆ. ಹೆಚ್ಚಿನ ನೀರಿನ ಅವಶ್ಯಕತೆ ಕುರಿತು ಆದ್ಯತೆಯ ಮೇರೆಗೆ ಕೊಳವೆ ಬಾವಿ ಕೊರೆಸುವ ಭರವಸೆ ನೋಡಿದರು. ನಂತರ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು.