ದೊಡ್ಡಬಳ್ಳಾಪುರ: ಹಿರಿಯ ನಾಗರಿಕರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಹಿರಿಯ ನಾಗರಿಕರ ವಾರ್ಡ್ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕಂದಾಯ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಅಶೋಕ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ದೊಡ್ಡಬಳ್ಳಾಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿಂದು ಹಿರಿಯ ನಾಗರಿಕರ ವಾರ್ಡ್ ಮತ್ತು ಒಳಚರಂಡಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಅವರು.
ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ವಿಪತ್ತು ನಿರ್ವಹಣೆ ಅಡಿಯಲ್ಲಿ ಶೀಘ್ರವೇ ಮುಖ್ಯಮಂತ್ರಿ ಹಾಗೂ ಸಚಿವರ ರಾಜ್ಯ ಮಟ್ಟದ ಸಭೆ ನಡೆಯಲಿದ್ದು, ತ್ವರಿತವಾಗಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಕೋವಿಡ್ ಎರಡನೇ ಅಲೆ ಹಿನ್ನೆಲೆ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಹಂತದಲ್ಲಿ ಕೋವಿಡ್ ಪರಿಶೀಲನಾ ಸಭೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ದೊಡ್ಡಬಳ್ಳಾಪುರ ಶಾಸಕರಾದ ಟಿ. ವೆಂಕಟರಮಣಯ್ಯ ಅವರು ಮಾತನಾಡಿ, ರಾಜ್ಯ ಸರ್ಕಾರದ ರೂ.80 ಲಕ್ಷ ರೂಪಾಯಿ ಅನುದಾನದಲ್ಲಿ ಹಿರಿಯ ನಾಗರಿಕರ ವಾರ್ಡ್ ನಿರ್ಮಿಸಲು ಉದ್ದೇಶಿಸಲಾಗಿದೆ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 50 ಲಕ್ಷ ರೂಪಾಯಿಗಳ ಅನುದಾನದಲ್ಲಿ ಒಳಚರಂಡಿ ನಿರ್ಮಾಣ ಕಾಮಗಾರಿ ಮಾಡಲಾಗುತ್ತಿದ್ದು, ಗುಣಮಟ್ಟದ ಕಾಮಗಾರಿ ಕೈಗೊಂಡು, ನಿರ್ದಿಷ್ಟ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 250 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಬೇಕಿದೆ ಎಂದರು. ಅಲ್ಲದೆ, ಬೇಸಿಗೆ ಆರಂಭವಾಗಿದ್ದು ತಾಲ್ಲೂಕಿನ 127 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವುದರಿಂದ 60 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತಾಗಿರುವ ಹಿನ್ನೆಲೆ, ರಾಜ್ಯ ಸರ್ಕಾರದಿಂದ 65 ಲಕ್ಷ ರೂಪಾಯಿಗಳ ಅನುದಾನ ದೊರೆತಿದ್ದು, ಇನ್ನೂ ಹೆಚ್ಚಿನ ನೆರವು ನೀಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷ ವಿ.ಪ್ರಸಾದ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಗೌಡ, ಜಿಲ್ಲಾ ಆರೋಗ್ಯ ರಕ್ಷಣಾ ಸಮಿತಿ ಸದಸ್ಯರಾದ ಉಮಾ ಮಹೇಶ್ವರಿ, ಮಾಜಿ ಶಾಸಕ ಮುನಿರಾಜು, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಮಂಜುಳಾದೇವಿ, ಉಪವಿಭಾಗಾಧಿಕಾರಿ ಅರುಳ್‌ಕುಮಾರ್, ಡಿವೈಎಸ್ಪಿ ಟಿ.ರಂಗಪ್ಪ, ತಹಶೀಲ್ದಾರ್ ಶಿವರಾಜ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಪರಮೇಶ್ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ ಅವರು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದು, ಕೋವಿಡ್ 2ನೇ ಅಲೆ ಹಿನ್ನೆಲೆ, ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ಯಾನಿಟೈಸರ್ ಬಳಸುವ ಮೂಲಕ ಜಾಗೃತರಾಗಿರುವಂತೆ ತಿಳಿಸಿದರು. ಅಲ್ಲದೆ, 45 ವರ್ಷ ಮೇಲ್ಪಟ್ಟ ಎಲ್ಲರೂ ಕೋವಿಡ್ ಲಸಿಕೆ ಪಡೆಯುವಂತೆ ಸಲಹೆ ನೀಡಿದರು.
ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಕಾರಣ ಲಸಿಕೆ ಪಡೆಯಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದರು.