ಮಂಗಳೂರು: ಬಂಟ್ವಾಳ ಸಮೀಪದ ಕಕ್ಯಪದವು ಬಳಿ ನಡೆದ ‘ಸತ್ಯ-ಧರ್ಮ’ ಜೋಡುಕರೆ ಬಯಲು ಕಂಬಳ ಹಲವು ವೈಶಿಷ್ಟ್ಯಗಳಿಂದಾಗಿ ಗಮನಸೆಳೆಯಿತು. ತುಳುನಾಡಿನಲ್ಲಿ ಯಕ್ಷಗಾನವು ಜನಪದ ಕಲೆಯಾಗಿ ಗಮನಸೆಳೆದರೆ, ಕಂಬಳ ಜನಪದ ಕ್ರೀಡೆಯ ಐತಿಹ್ಯ ಹೊಂದಿದೆ.
ಹಲವು ವಿಶೇಷತೆಗಳ ಸಂಗಮಕ್ಕೆ ಸಾಕ್ಷಿಯಾದ ಈ ಕಂಬಳೋತ್ಸವದಲ್ಲಿ ಸುಮಾರು 155 ಜೋಡಿ ಕೋಣಗಳು ಭಾಗವಹಿಸಿದ್ದವು. ಇದೇ ಕಂಬಳೋತ್ಸವದ ವೇದಿಕೆಯಲ್ಲಿ ನಾಡಿನ ಸಮಾಜಿಕ ಕಾರ್ಯಕರ್ತ ಗೋವಿಂದ ಬಾಬು ಪೂಜಾರಿ ಅವರಿಗೆ ‘ತುಳುನಾಡ ಮುತ್ತು’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಯಾರು ಈ ಗೋವಿಂದ ಪೂಜಾರಿ?
- ಕರಾವಳಿಯ ಕುಂದಾಪುರ ಮೂಲದ ಗೋವಿಂದ ಬಾಬು ಪೂಜಾರಿ ಆಹಾರೋದ್ಯಮ ಕ್ಷೇತ್ರದ ಖ್ಯಾತ ಉದ್ಯಮಿ. ChefTalk ಹೆಸರಿನ ಉದ್ಯಮ ಸ್ಥಾಪಿಸಿ ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್, ಗುಜರಾತ್, ಬಿಹಾರ ಸಹಿತ ವಿವಿಧ ರಾಜ್ಯಗಳಲ್ಲಿ ಆರೇಳು ಸಾವಿರ ಮಂದಿಗೆ ಉದ್ಯೋಗ ಕೊಡಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕುಂದಾಪುರ ಸಮೀಪ ಬಿಜೂರು ಎಂಬ ಪ್ರದೇಶದಲ್ಲಿ ಬೇಸಿಗೆ ಸಂದರ್ಭ ಅಲ್ಲಿನ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದರು. ಅಲ್ಲಿನ ಜನರ ಸಮಸ್ಯೆ ಕಂಡು ಮಮ್ಮಲ ಮರುಗಿದ ಗೋವಿಂದ ಬಾಬು ಪೂಜಾರಿಯವರು ತನ್ನದೇ ಖರ್ಚಿನಲ್ಲಿ ಆ ಊರಿಗೆ ಜೀವಜಲ ಹರಿಸಿ ‘ಆಧುನಿಕ ಭಗೀರಥ’ ಅನ್ನಿಸಿಕೊಂಡು ಭಾರೀ ಸುದ್ದಿಯಾದರು.
- ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳ ಹಲವಾರು ಬಡ ಕುಟುಂಬಗಳಿಗೆ ಮನೆ ಕಟ್ಟಿಸಿ ಬದುಕುವ ಅವಕಾಶ ಕೊಟ್ಟು ಮಾನವೀಯತೆ ಮೆರೆದ ಇವರ ನಡೆ ಕೂಡಾ ಪ್ರಶಂಸಾರ್ಹ.
ನಾಡಿನ ಜನರು ಸಮಸ್ಯೆಗಳ ಪಟ್ಟಿಯನ್ನು ಹೊತ್ತು ಗೋವಿಂದ ಬಾಬು ಪೂಜಾರಿ ಬಳಿ ಬರುತ್ತಿರುತ್ತಾರೆ. ಅಂಥವರಿಗೆ ನೆರವು ನೀಡಲೆಂದೇ ‘ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್’ ಸ್ಥಾಪಿಸಿ ಆ ಮೂಲಕ ಶೋಷಿತರ ನೆರವಿಗೆ ನಿಂತಿದ್ದಾರೆ.
- ಕರಾವಳಿಯಲ್ಲಿ ಸಣ್ಣ ವ್ಯಾಪಾರಿಗಳಿಗೆ ಹಾಗೂ ಸ್ವುದ್ಯೋಗಾಕಾಂಕ್ಷಿಗಳಿಗೆ ನೆರವಾಗಲೆಂದು ‘ವರಲಕ್ಷ್ಮೀ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಸ್ಥಾಪಿಸಿದ್ದಾರೆ. ಅಷ್ಟೇ ಅಲ್ಲ, ಶೋಷಿತರ ಹಾಗೂ ಬಡವರ ಆರ್ಥಿಕ ಸಬಲೀಕರಣ ಉದ್ದೇಶದಿಂದ ಶ್ರೀ ನಾರಾಯಣಗುರು ಕೋಆಪರೇಟಿವ್ ಸೊಸೈಟಿ ಆರಂಭಿಸಿರುವ ಗೋವಿಂದ ಬಾಬು ಪೂಜಾರಿಯವರು ಇದನ್ನು ಸಹಕಾರ ಬ್ಯಾಂಕನ್ನಾಗಿ ಪರಿವರ್ತಿಸುವ ಪ್ರಯತ್ನದಲ್ಲಿದ್ದಾರೆ.
ಇದನ್ನೂ ಓದಿ.. ಯವಜನರಿಗೆ ಇವರೇ ಸ್ಫೂರ್ತಿ.. ಲೇಡಿ ಪೊಲೀಸ್ ಎಸಿಪಿ ರೀನಾ ಸುವರ್ಣ
ಕರಾವಳಿಯಲ್ಲಿ ಸಂಕಷ್ಟದಲ್ಲಿರುವ ಮೀನುಗಾರರ ನೆರವಿಗೆ ಧಾವಿಸುವ ಉದ್ದೇಶದಿಂದ ದೇಶದಲ್ಲೇ ಮೊದಲೆಂಬಂತೆ ಮೀನಿನ ಚಿಪ್ಸ್, ವೇಫರ್ಸ್ ಸಹಿತ ಮೀನಿನ ಖಾದ್ಯಗಳನ್ನು ತಯಾರಿಸುವ ಉದ್ದಿಮ ಆರಂಭಿಸಿದ್ದಾರೆ. ಈ ಮೂಲಕ ಸಾವಿರಾರು ಜನರಿಗೆ ಉದ್ಯೋಗ ಕಲ್ಲಿಸಬಹುದೆಂಬುದು ಅವರ ಆಶಯ.
ಸಾಮಾಜಿಕ ವಲಯದಲ್ಲಿನ ಈ ಸಾಧನೆಯನ್ನು ಗಮನಿಸಿರುವ ಸಾಮಾಜಿಕ ಹರಿಕಾರರ ಗುಂಪು ಕರಾವಳಿಯ ಕಕ್ಯಪದವಿನಲ್ಲಿ ನಡೆದ ‘ಸತ್ಯ-ಧರ್ಮ’ ಜೋಡುಕರೆ ಕಂಬಳೋತ್ಸವದಲ್ಲಿ ‘ತುಳುನಾಡ ಮುತ್ತು’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.