ವರದಿ: ಸುರೇಶ್ ಬಾಬು ದೊಡ್ಡಬಳ್ಳಾಪುರ
ಬೆಂಗಳೂರು:-ರಾಜ್ಯದಲ್ಲಿ ಈಗಾಗಲೇ ಕುರುಬ, ಪಂಚಮಸಾಲಿ ಸಮುದಾಯದವರು ಮೀಸಲಾತಿಗಾಗಿ ಬೃಹತ್ ಹೋರಾಟ, ಪ್ರತಿಭಟನೆಯ ದಾರಿ ಹಿಡಿದಿದ್ದಾರೆ. ಇದೀಗ ರಾಜ್ಯಾದ್ಯಂತ 30 ಲಕ್ಷಕ್ಕೂ ಹೆಚ್ಚು ಜನರಿರುವ ದೇವಾಂಗ ಸಮುದಾಯಕ್ಕೆ ದೇವಾಂಗ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಯ ಕೂಗು ಜೋರಾಗಿದೆ.
ದೇವಾಂಗ ಸಮುದಾಯ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿದೆ. ರಾಜ್ಯದಲ್ಲಿ ದೇವಾಂಗ ಸಮುದಾಯದ ಜನರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮದ ಅವಶ್ಯಕತೆ ಇದೆ. ಈ ಕುರಿತು ಸರ್ಕಾರದ ಗಮನಕ್ಕೆ ಹಲವು ಬಾರಿ ತರಲಾಗಿದೆ. ಆದರೆ ಸರ್ಕಾರ ಮಾತ್ರ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.
ಈಗಾಗಲೇ ಸರ್ಕಾರ ಹಲವು ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ನಿಗಮ ಸ್ಥಾಪನೆ ಮಾಡಿದೆ. ಅದೇ ರೀತಿ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ನಿಗಮಕ್ಕೆ 500 ಕೋಟಿ ರೂಪಾಯಿ ಮೀಸಲಿಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ರಾಜ್ಯಾದ್ಯಂತ ಸುಮಾರು 40 ಲಕ್ಷಕ್ಕೂ ಅಧಿಕ ದೇವಾಂಗ ಸಮುದಾಯದದವರಿದ್ದಾರೆ. ತಾಲ್ಲೂಕಿನಲ್ಲಿ 60 ಸಾವಿರಕ್ಕೂ ಹೆಚ್ಚು ಮಂದಿ ಇದ್ದಾರೆ. ಆದರೆ ಈವರೆಗೆ ಯಾರೂ ಬಲಿಷ್ಠ ನಾಯಕರಾಗಿ ಗುರುತಿಸಿಕೊಂಡಿಲ್ಲ. ಕನಿಷ್ಟ ೫ ರಿಂದ ೧೦ ಮಂದಿ ಶಾಸಕರು ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಆಯ್ಕೆಯಾಗಬೇಕು ಆದರೆ ಯಾವುದೇ ಪಕ್ಷ ನಮ್ಮ ಗುರುತಿಸಿಲ್ಲ ಕೂಡಲೇ ನಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಲೇಬೇಕು ಎಂದು ಟಿಎಂಸಿ ಬ್ಯಾಂಕ್ ಅಧ್ಯಕ್ಷ ವಾಸು ಆಗ್ರಹಿಸಿದ್ದಾರೆ.
ದೇವಾಂಗ ಅಭಿವೃದ್ಧಿ ನಿಗಮ ಮಂಡಳಿ, ರಾಜಕೀಯ, ಸಾಮಾಜಿಕ ಪ್ರಾತಿನಿಧ್ಯವನ್ನು ಮುಖ್ಯ ಅಜೆಂಡಾವಾಗಿಟ್ಟುಕೊಂಡು ನಗರದಲ್ಲಿ ಮಾರ್ಚ್ ೧ಕ್ಕೆ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ವೇಳೆ ದೇವಾಂಗ ಜಗದ್ಗುರು ಶ್ರೀ ದಯಾನಂದಪುರಿ ಸ್ವಾಮೀಜಿ, ರಾಜ್ಯಸಭಾ ಸದಸ್ಯ ಕೆ.ನಾರಾಯಣ, ರಾಜ್ಯ ದೇವಾಂಗ ಅಧ್ಯಕ್ಷ ರಮೇಶ್, ಹಂಪಿಯ ಗಾಯತ್ರಿ ಮಿತ್ರಪೀಠದ ಗಿರಿಯಪ್ಪ, ಆಂಧ್ರ ಪ್ರದೇಶದ ದೇವಾಂಗ ಸಂಘದ ಅಧ್ಯಕ್ಷ ಬೀರಪ್ಪ, ರವೀಂದ್ರ ಕಲಬುರಗಿ ಮುಂತಾದ ಮುಖಂಡರು ಭಾಗಿಯಾಗಲಿದ್ದಾರೆ.
ಯಾವುದೇ ಪಕ್ಷ, ಯಾವುದೇ ನಾಯಕರು ನಮ್ಮ ಸಮುದಾಯವನ್ನು ಗುರುತಿಸಿ ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಬೆಳೆಸಿಲ್ಲ. ದೇವಾಂಗ ಸಮುದಾಯ ಎಲ್ಲಾ ರಂಗದಲ್ಲೂ ಹಿಂದುಳಿದಿದೆ. ಸಮುದಾಯ ಅಭಿವೃದ್ಧಿಗಾಗಿ ನಿಗಮ ಮಂಡಳಿ ಸ್ಥಾಪನೆ ಮಾಡಬೇಕು, 500 ಕೋಟಿಯ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ದೇವಾಂಗ ಸಮನ್ವಯ ಸಮಿತಿ ಸಂಚಾಲಕ ಎಂ.ಜಿ ಶ್ರೀನಿವಾಸ್ ಆಗ್ರಹಿಸಿದ್ದಾರೆ.
ರಾಜಕೀಯ ಕಾರಣಗಳಿಂದ ಸಣ್ಣಪುಟ್ಟ ಸಮುದಾಯಗಳಿಗೆ ಸರ್ಕಾರಗಳು ನಿಗಮ ಮಂಡಳಿ ಸ್ಥಾಪನೆ ಮಾಡಿದೆ. ಆದರೆ ನಮ್ಮ ಸಮುದಾಯಕ್ಕೆ ಯಾವ ಸರ್ಕಾರವು ಹೆಚ್ಚಿನ ಅನುದಾನ ನೀಡಿಲ್ಲ. ಗುರುತಿಸಿಲ್ಲ. ಹೀಗಾಗಿ ದೇವಾಂಗ ಸಮುದಾಯದ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ಬೇಡಿಕೆ ಈಡೇರಿಕೆಗೆ ಬೃಹತ್ ಹೋರಾಟಕ್ಕೂ ಸಿದ್ಧ. ಎಂದು ಆಂಧ್ರದೇವಾಂಗ ಸಂಘದ ಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ ಹೇಳಿದ್ದಾರೆ