ಸಂಸದ ಜಿಎಂ ಸಿದ್ದೇಶ್ವರ ತಂತ್ರಗಾರಿಕೆಗೆ ಕಾಂಗ್ರೆಸ್ ತಳಮಳ.. ದಾವಣಗೆರೆ ಮೇಯರ್ ಚುನಾವಣೆ ಹಿನ್ನೆಲೆ ದೇವರಮನೆ ಶಿವಕುಮಾರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆ.. ಬಿಜೆಪಿಗೆ ಪಾಲಿಗೆ ಪಾಲಿಕೆ ಗದ್ದುಗೆ..!
(ವರದಿ: ಹೆಚ್.ಎಂ.ಪಿ ಕುಮಾರ್)
ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಕ್ಷಿಪ್ರ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಿದೆ. ಪಾಲಿಕೆಯ ಕಾಂಗ್ರೆಸ್ ಸದಸ್ಯ ದೇವರಮನೆ ಶಿವಕುಮಾರ್ ಅವರು ಇದೀಗ ಕಾಂಗ್ರೆಸ್ ತೊರೆದು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡು ಇಡೀ ರಾಜಕೀಯ ಲೆಕ್ಕಾಚಾರಗಳನ್ನೇ ಬುಡಮೇಲು ಮಾಡಿದ್ದಾರೆ. ಇದು ಅಚ್ಚರಿ ಹಾಗೂ ಕುತೂಹಲಕಾರಿ ಬೆಳವಣಿಗೆಯಾಗಿದ್ದು, ಕೇಸರಿ ಪಡೆಯಲ್ಲೂ ಸಂಚಲನ ಮೂಡಿಸಿದೆ.
ದಾವಣಗೆರೆ ಪಾಲಿಕೆಯ 22 ನೇ ವಾರ್ಡಿನ ಸದಸ್ಯರು, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷರು ಆಗಿರುವ ದೇವರಮನೆ ಶಿವಕುಮಾರ್ ಕಾಂಗ್ರೆಸ್ ಪಕ್ಷದ ತಮ್ಮ ಸ್ಥಾನ ತೊರೆದು, ಸಂಸದ ಜಿ,ಎಂ ಸಿದ್ದೇಶ್ವರ್, ಶಾಸಕ ಎಸ್.ಎ. ರವೀಂದ್ರನಾಥ್, ಮೇಯರ್ ಅಜಯ್ ಕುಮಾರ್, ಮಾಜಿ ವಿಧಾನಪರಿಷತ್ ಸದಸ್ಯರಾದ ಶಿವಯೋಗಿ ಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಹನಗವಾಡಿ ವೀರೇಶ್, ಮಾಜಿ ಜಿಲ್ಲಾಧ್ಯಕ್ಷ ಯಶವಂತ್ ರಾವ್ ಜಾಧವ್, ಉಪಾಧ್ಯಕ್ಷರಾದ ಶ್ರೀನಿವಾಸ್ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಂಡರು.
ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಗೂ ಮುನ್ನ ಕಾಂಗ್ರೆಸ್ ತಂತ್ರದ ನಡುವೆಯೇ ಪ್ರತಿತಂತ್ರ ರೂಪಿಸಿರುವ ಬಿಜೆಪಿ ಬಹುತೇಕ ಪಾಲಿಕೆ ಗದ್ದುಗೆ ಹಿಡಿದಿರುವುದು ಕುತೂಹಲಕಾರಿ ಬೆಳವಣಿಗೆ.
ಒಟ್ಟು 17 ಸದಸ್ಯ ಬಲ ಹೊಂದಿರುವ ಬಿಜೆಪಿಗೆ ನಾಲ್ವರು ಪಕ್ಷೇತರರ ನಡುವೆಯೇ ಮತ್ತೊಬ್ಬ ಕಾಂಗ್ರೆಸ್ ಸದಸ್ಯ ದೇವರಮನೆ ಶಿವಕುಮಾರ್ ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ಬಿಜೆಪಿಯನ್ನು ಮತ್ತಷ್ಟು ಬಲಪಡಿಸಿದರು.
ಕಳೆದ ಬಾರಿಯೂ ಮೇಯರ್ ಚುನಾವಣೆಯ ವೇಳೆ ಕಾಂಗ್ರೆಸ್ ಪಕ್ಷದ ಒಡಕಿನಿಂದ, ಅಸಮಾಧಾನದಿಂದಾಗಿ ಇಬ್ಬರು ಕಾಂಗ್ರೆಸ್ ಸದಸ್ಯರಾದ ಜೆ.ಎನ್. ಶ್ರೀನಿವಾಸ್ ಮತ್ತು ಅವರ ಪತ್ನಿ ಶ್ವೇತಾ ಇಬ್ಬರು ಚುನಾವಣೆಗೆ ಗೈರಾಗಿ ಗಾದಿ ಏರಲು ಬಂದಿದ್ದ ಕಾಂಗ್ರೆಸ್‌ಗೆ ತೀವ್ರ ನಿರಾಸೆ ಉಂಟುಮಾಡಿದ್ದರು. ಈಗ ಮತ್ತದೇ ಕಳವಳದ ಬೆಳವಣಿಗೆ ಕಾಂಗ್ರೆಸ್ ಪಾಳಯದಲ್ಲಿ ನಡುಕ ಸೃಷ್ಟಿಸಿತು.
ಬಿಜೆಪಿಯಲ್ಲಿ ಒಟ್ಟು 17 ಸದಸ್ಯರಿದ್ದು, ನಾಲ್ವರು ಪಕ್ಷೇತರರೂ ಸೇರಿ 21 ಸದಸ್ಯರು, ತಲಾ ಒಬ್ಬ ಶಾಸಕ, ಸಂಸದರು ಹಾಗೂ ವಿಧಾನ ಪರಿಷತ್‌ನ ಏಳು ಸದಸ್ಯರು ಸೇರಿ ಒಟ್ಟು 30 ಮತಗಳ ಬಲವಿತ್ತು. ಈಗ ಕಾಂಗ್ರೆಸ್ ನ ದೇವರಮನೆ ಶಿವಕುಮಾರ್ ಸೇರ್ಪಡೆಗೊಂಡಿರುವುದರಿಂದ ಬಿಜೆಪಿಗೆ ಬಲಬಂದಿದೆ.
ಕಾಂಗ್ರೆಸ್ ನಲ್ಲಿ ಒಟ್ಟಾರೆ 28 ಮತಗಳ ಬಲವಿತ್ತು. ಆದರೆ, ಈಗ ಮತ್ತೋರ್ವ ಸದಸ್ಯರ ನಿರ್ಗಮನದಿಂದ 27 ಕ್ಕೆ ಕುಸಿತಗೊಂಡಿದೆ. ಬಿಜೆಪಿ ಬಲ ಈಗ 30ಕ್ಕೆ ಹೆಚ್ಚಿದೆ. ಈ ಮೂಲಕ ಬಿಜೆಪಿಗೆ ಮತ್ತೊಮ್ಮೆ ಪಾಲಿಕೆ ಗದ್ದುಗೆ ಸಿಕ್ಕಿದೆ.