ಏರೋ ಇಂಡಿಯಾ 2021ರ ವಿಶೇಷ ಒಪ್ಪಂಗಳು.. 2,464 ಕೋಟಿ ರೂ. ಮೊತ್ತದ 34 ಒಪ್ಪಂದಗಳು.. 6,462 ಉದ್ಯೋಗ ಸೃಷ್ಟಿಯ ನಿರೀಕ್ಷೆ..
ಬೆಂಗಳೂರು: ಏಷ್ಯಾದಲ್ಲೇ ಅತಿ ದೊಡ್ಡ ಏರೋಸ್ಪೇಸ್ ಹಬ್ ಆಗಿ ಹೊರಹೊಮ್ಮುವ ಮೂಲಕ ಜಾಗತಿಕ ಮಟ್ಟದಲ್ಲಿ ಛಾಪು ಮೂಡಿಸಲು ಸಜ್ಜಾಗಿರುವ ಕರ್ನಾಟಕ, ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮಗಳಿಗೆ ಸಂಬಂಧಿಸಿದ 2,464 ಕೋಟಿ ರೂ. ಮೊತ್ತದ 34 ಒಪ್ಪಂದಗಳಿಗೆ ಶುಕ್ರವಾರ ಸಹಿ ಹಾಕಿದೆ.
ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2021ನಲ್ಲಿ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಈ ವೇಳೆ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ ಶೆಟ್ಟರ್, ” ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮದಲ್ಲಿ ರಾಜ್ಯದ ಸಾಮರ್ಥ್ಯವನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನವಾಗಿ ಈ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ,” ಎಂದರು
ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿಗಳಿಗೆ ರಾಜ್ಯದಲ್ಲಿ ಈಗಾಗಲೇ ಪೂರಕ ಪರಿಸರ ವ್ಯವಸ್ಥೆ ಇದ್ದು, ಈ ಕೈಗಾರಿಕಾ ವಲಯಗಳಲ್ಲಿ ಅಗತ್ಯ ಭೂಮಿಯೂ ಲಭ್ಯವಿದೆ. ನೂತನ ಕೈಗಾರಿಕಾ ನೀತಿ 2020-25 ಅಡಿ ಹೂಡಿಕೆದಾರರಿಗೆ ಅನುಕೂಲಕರ ಅರ್ಥ ವ್ಯವಸ್ಥೆ ರೂಪಿಸಲು ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಅಗತ್ಯ ಕೌಶಲ ಹೊಂದಿರುವ ಕಾರ್ಮಿಕ ಕಾರ್ಯಪಡೆಯ ಲಭ್ಯತೆ ಜತೆಗೆ, ಕಾರ್ಮಿಕ ಕಾನೂನಿಲ್ಲೂ ಸುಧಾರಣೆ ತರಲಾಗಿದೆ. ಉತ್ತಮ ಸಂಪರ್ಕ ಹಾಗೂ ಲಾಜಿಸ್ಟಿಕ್ ವ್ಯವಸ್ಥೆ ಇದ್ದು, ಸುಲಲಿತ ವ್ಯವಹಾರಕ್ಕೆ ಪ್ರಕ್ರಿಯೆಗಳನ್ನು ಸರಳಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
ನಿರ್ದಿಷ್ಟ ಏರೋಸ್ಪೇಸ್ ನೀತಿಯನ್ನು ರೂಪಿಸಿದ ದೇಶದ ಮೊದಲ ರಾಜ್ಯ ನಮ್ಮದು. ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮದಲ್ಲಿ ರಾಜ್ಯ ಅಗ್ರ ಸ್ಥಾನದಲ್ಲಿದೆ. ಏರೋಸ್ಪೇಸ್‌ಗೆ ಸಂಬಂಧಿಸಿದ ದೇಶದ ಒಟ್ಟು ರಫ್ತಿನಲ್ಲಿ ನಮ್ಮ ಪಾಲು ಶೇ. 65 ರಷ್ಟು. ಏರ್‌ಕ್ರಾಫ್ಟ್, ಬಾಹ್ಯಾಕೇಶಕ್ಕೆ ಸಂಬಂಧಿಸಿದ ಶೇ.25ರಷ್ಟು ಉದ್ಯಮಗಳು ನಮ್ಮಲ್ಲಿವೆ. ರಕ್ಷಣಾ ಸೇವೆಗೆ ಬಳಕೆಯಾಗುವ ಶೇ.67ರಷ್ಟು ಏರ್‌ಕ್ರಾಫ್ಟ್ ಮತ್ತು ಹೆಲಿಕಾಪ್ಟರ್‌ಗಳ ಉತ್ಪಾದನೆ ಕರ್ನಾಟಕದಲ್ಲಿ ಆಗುತ್ತದೆ.ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮದ ಪೂರಕ ಪರಿಸರ ವ್ಯವಸ್ಥೆ ನಮ್ಮಲ್ಲಿದ್ದು, ಈ ನೂತನ ಒಪ್ಪಂದಗಳ ಮುಂದಿನ ಗುರಿ ಸಾಧನೆಗೆ ನೆರವಾಗಲಿವೆ ಎಂದು ತಿಳಿಸಿದರು.






















































