ಬೆಂಗಳೂರು: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಶಾಸಕ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಕೋರಿರುವ 200 ಕೋಟಿ ರೂಪಾಯಿ ಅನುದಾನದ ಶಿಫಾರಸ್ಸನ್ನು ಸಿಎಂ ಯಡಿಯೂರಪ್ಪ ತಿರಸ್ಕರಿಸಿದ್ದಾರೆ.
ಚಾಮರಾಜ ಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮುಖ್ಯ ರಸ್ತೆಗಳು, ಅಡ್ಡ ರಸ್ತೆಗಳ ಅಭಿವೃದ್ಧಿ, ರಸ್ತೆ ಅಗಲೀಕರಣ, ಸುರಂಗ ಮಾರ್ಗ, ಶಾಲಾ ಕಟ್ಟಡಗಳು ಹಾಗೂ ಮೈಸೂರು ರಸ್ತೆಯ ಮುಸ್ಲಿಂ ಬರಿಯಲ್ ಗ್ರೌಂಡ್‌ನಿಂದ ಟೋಲ್‌ಗೇಟ್ (ಕ್ರಿಶ್ಚಿಯನ್ ಸ್ಮಶಾನ)ವರೆಗೆ ಗ್ರೇಡ್ ಸೆಪರೇಟರ್ ನಿರ್ಮಾಣ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಜಮೀರ್ ಅಹ್ಮದ್ ಖಾನ್ ಅವರು ಸಿಎಂ ಯಡಿಯೂರಪ್ಪ ಅವರಿಗೆ ಕೋರಿಕೆ ಸಲ್ಲಿಸಿದ್ದರು. ತಾವು ಪ್ರತಿನಿಧಿಸುತ್ತರುವ ಕ್ಷೇತ್ರದ ಈ ಅಭಿವೃದ್ದಿ ಕೆಲಸಗಳಿಗಾಗಿ 200 ಕೋಟಿ ರೂಪಾಯಿಗಳ ಅನುದಾನವನ್ನು ಮಂಜೂರು ಮಾಡಿವಂತೆ ಮನವಿ ಸಲ್ಲಿಸಿದ್ದರು. ಈ ಮನವಿಗೆ ಸ್ಪಂಧಿಸಿದ್ದ ಯಡಿಯೂರಪ್ಪ ಅವರು, ರಾಜ್ಯ ಸರ್ಕಾರದ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಜಮೀರ್ ಪತ್ರವನ್ನು ವರ್ಗಾಯಿಸಿದ್ದರು.
ಇದನ್ನೂ ಓದಿ.. ಮೂರು ಕೋತಿಗಳ ಬಗ್ಗೆ ಬೆಚ್ಚಿದ ಬಿಬಿಎಂಪಿ; ಎದ್ದೋ ಬಿದ್ದೋ ಓಡಿಬಂದ ಸಿಬ್ಬಂದಿ.. ಬೀಳುವ ಹಂತದಲ್ಲಿದ್ದ ಮರ ತೆರವು
ಈ ವಿಚಾರ ಆಡಳಿತಾರೂಢ ಬಿಜೆಪಿಯಲ್ಲೇ ತಳಮಳ ಸೃಷ್ಟಿಸಿ ಭಾರೀ ಸುದ್ದಿಯಾಯಿತು. ಬಿಎಸ್‌ವೈ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರ ಹಾಕುತ್ತಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈ ಜಮೀರ್ ಅಹ್ಮದ್ ವಿಚಾರವನ್ನೂ ಮುಂದಿಟ್ಟು ಯಡಿಯೂರಪ್ಪ ಅವರನ್ನು ಪೇಚಿಗೆ ಸಿಲುಕಿಸಿದರು. ಆಡಳಿತಾರೂಢ ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡಲು ಹಿಂದೇಟು ಹಾಕುತ್ತಿರುವ ಸಿಎಂ ಅವರು ಕಾಂಗ್ರೆಸ್ ಶಾಸಕರ ಒತ್ತಡಕ್ಕೆ ಮಣಿಯುತ್ತಿದ್ದಾರೆಂದು ಆಕ್ರೋಶ ಹೊರ ಹಾಕಿದ್ದರು.
ಈ ನಡುವೆ, ಕೈ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮನವಿ ಪತ್ರದ ಪ್ರತಿ ಮಾಧ್ಯಮಗಳಿಗೆ ಸೋರಿಕೆಯಾಗಿ ಈ ವಿಚಾರ ರಾಜ್ಯ ರಾಜಕಾರಣದಲ್ಲೇ ಕೋಲಾಹಲ ಸೃಷ್ಟಿಸಿತು. ಇದರಿಂದ ಗಲಿಬಿಲಿಗೊಂಡ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಮೀರ್ ಅಹ್ಮದ್ ಖಾನ್ ಅವರ ಕೋರಿಕೆಯನ್ನು ತಿರಸ್ಕರಿಸಿದ್ದಾರೆ. ಈ ಕುರಿತ ಸ್ಪಷ್ಟನೆಯ ಪ್ರತಿ ಉದಯ ನ್ಯೂಸ್‌ಗೆ ಲಭಿಸಿದೆ.
ಆರ್ಥಿಕ ಇಲಾಖೆ ಸ್ಪಷ್ಟನೆ
ಚಾಮರಾಜಪೇಟೆ ಶಾಸಕ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ 200 ಕೋಟಿ ರೂಪಾಯಿ ಅನುದಾನ ಕೋರಿ ಸಿಎಂಗೆ ಸಲ್ಲಿಸಿರುವ ಕೋರಿಕೆ ಬಗ್ಗೆ ಹಾಗೂ ಆ ಕುರಿತು ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ‘ನಮೋ ಸಮಾಜ್’ ಮುಖ್ಯಸ್ಥ ಜಿ.ಆರ್.ಅನಿಲ್ ಕುಮಾರ್ ಅವರು ಆರ್.ಟಿ.ಐ. ಮೂಲಕ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಂದ ಮಾಹಿತಿ ಕೋರಿದ್ದರು. ಈ ಬಗ್ಗೆ ಮಾಹಿತಿ ನೀಡಿರುವ ಆರ್ಥಿಕ ಇಲಾಖೆ, ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಪತ್ರದಲ್ಲಿ ಮುಖ್ಯಮಂತ್ರಿಗಳು ಯಾವುದೇ ಆದೇಶ ನೀಡಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
‘ಮಖ್ಯಮಂತ್ರಿಗಳು ಕೇವಲ ಸಹಿ ಮಾಡಿರುತ್ತಾರೆ. ಅನಂತರ ಈ ಪತ್ರವನ್ನು ಮುಖ್ಯಮಂತ್ರಿಯವರ ಕಚೇರಿ ಹಿಂಪಡೆದಿರುತ್ತದೆ. ಆದ್ದರಿಂದ ಸದರಿ ಮನವಿ ಪತ್ರದ ಮೇಲೆ ಆರ್ಥಿಕ ಇಲಾಖೆಯಿಂದ ಯಾವುದೇ ಕ್ರಮವಹಿಸಿರುವುದಿಲ್ಲ’ ಎಂದು ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿಗಳು ಅನಿಲ್ ಕುಮಾರ್ ಅವರಿಗೆ ನೀಡಿರುವ ಪತ್ರದಲ್ಲಿ ತಿಳಿಸಿದ್ದಾರೆ.