ದೆಹಲಿ: ಕೇಂದ್ರದ ಬಜೆಟ್ “ಆತ್ಮನಿರ್ಭರ್” ಅಲ್ಲ “ಆತ್ಮಬರ್ಬರ” ಎಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಿದ್ದರಾಮಯ್ಯ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸದಾನಂದ ಗೌಡರು, ಹತ್ತಾರು ಬಾರಿ ರಾಜ್ಯ ಬಜೆಟ್ ಮಂಡಿಸಿರುವ ಕಾಂಗ್ರೆಸ್ ನಾಯಕರಿಗೆ “ತೆರಿಗೆ ಯಾವುದು? ಸೆಸ್ ಯಾವುದು? ಕಸ್ಟಮ್ಸ್ ಡ್ಯೂಟಿ ಯಾವುದು? ಎಂಬುದರ ವ್ಯತ್ಯಾಸ ಗೊತ್ತಿಲ್ಲದಿರುವು ಆಶ್ಚರ್ಯವಾಗುತ್ತದೆ ಎಂದು ಟೀಕಿಸಿದ್ದಾರೆ
ತಾವು ಅಧಿಕಾರದಲ್ಲಿದ್ದಾಗ ರೈತರ ಏಳ್ಗೆಗೆ ಏನೂ ಮಾಡದ ಕಾಂಗ್ರೆಸ್ಸಿಗರು ಈಗ ರೈತರ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ರೈತರ ಬಗ್ಗೆ ಕಾಂಗ್ರೆಸ್ ಸರ್ಕಾರ ಏನು ಮಾಡಿತು ಮತ್ತು ಮೋದಿ ಸರ್ಕಾರ ಏನು ಮಾಡಿದೆ ಎಂಬ ಬಗ್ಗೆ ಹಣಕಾಸು ಸಚಿವರು ಒಂದಿಷ್ಟು ಮಾಹಿತಿ ನೀಡಿದ್ದಾರೆ. ಕಾಂಗ್ರಸ್ ಆಡಳಿತದ ಕೊನೆಯ ವರ್ಷ ಅಂದರೆ 2013-14ರಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ವ್ಯವಸ್ಥೆ ಮೂಲಕ ಕೇಂದ್ರ ಸರ್ಕಾರವು ರೈತರಿಂದ 33878 ಕೋಟಿ ರೂ ಮೌಲ್ಯದ ಗೋಧಿ ಖರೀದಿಸಿತ್ತು. ಅದೇ ನಮ್ಮ ಮೋದಿ ಸರ್ಕಾರ ಕಳೆದ ಹಣಕಾಸು ವರ್ಷದಲ್ಲಿ 52,802 ಕೋಟಿ ರೂ ಗೋಧಿ ಖರೀದಿಸಿದೆ. ಈ ವರ್ಷ (ಮಾರ್ಚ್ ವರೆಗೆ) 75000 ಕೋಟಿ ರೂ ಮೌಲ್ಯದ ಗೋಧಿ ಖರೀದಿಸಲಾಗುತ್ತಿದೆ. ಭತ್ತಕ್ಕೆ ಸಂಬಂಧಿಸಿ ಹೇಳುವುದಾದರೆ ಕಾಂಗ್ರೆಸ್ ಸರ್ಕಾರ 2013-14ರಲ್ಲಿ 63,928 ಕೋಟಿ ರೂ ವ್ಯಯಿಸಿತ್ತು. ನಾವು 2019-20ರಲ್ಲಿ 1,41,930 ಕೋಟಿ ರೂ ಮೊತ್ತದ ಭತ್ತ ಖರೀದಿಸಿದ್ದೇವೆ. ಈ ವರ್ಷ ಮಾರ್ಚ್ ವರೆಗೆ 1.71 ಲಕ್ಷ ಕೋಟಿ ರೂ ಭತ್ತ ಖರೀದಿಸುತ್ತಿದ್ದೇವೆ ಎಂದು ಅವರು ಅಂಕಿ ಅಂಶ ಒದಗಿಸಿದ್ದಾರೆ.
ಇನ್ನು ಬೇಳೆಕಾಳಿನ ಆವಕಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ನಮ್ಮ ಸರ್ಕಾರದ ಸಾಧನೆಗೂ ಕಾಂಗ್ರೆಸ್ಸಿನದಕ್ಕೂ ಹೋಲಿಕೆಯೇ ಇಲ್ಲ. 2013-14ರಲ್ಲಿ ಕಾಂಗ್ರೆಸ್ ಸರ್ಕಾರ 236 ಕೋಟಿ ರೂಪಾಯಿ ಮೌಲ್ಯದ ಬೇಳೆಕಾಳು ಖರೀದಿಸಿತ್ತು. ನಮ್ಮ ಸರ್ಕಾರ 2019-20ರಲ್ಲಿ 8,285 ಕೋಟಿ ಮೌಲ್ಯದ ಬೇಳೆಕಾಳು ಖರೀದಿಸಿದೆ. 2020-21ರಲ್ಲಿ 10,530 ಕೋಟಿ ಮೌಲ್ಯದ ಬೇಳೆಕಾಳು ಖರೀದಿಸುತ್ತಿದ್ದೇವೆ. ಈ ಅಂಕಿ-ಅಂಶಗಳಿಂದ ಯಾರು ನಿಜವಾಗಿಯೂ ರೈತರ ಪರ ಇದ್ದಾರೆ ಎಂಬುದು ಸುಲಭವಾಗಿ ತಿಳಿಯುತ್ತದೆ ಎಂದು ಸದಾನಂದ ಗೌಡ ಹೇಳಿದರು.