(ವರದಿ: ಜಯಪ್ರಕಾಶ್, ವಿಶೇಷ ಪ್ರತಿನಿಧಿ)
ದೆಹಲಿ: ಇಸ್ರೇಲ್ ರಾಯಭಾರ ಕಚೇರಿ ಬಳಿ ಶುಕ್ರವಾರ ಸಂಭವಿಸಿದ ಬಾಂಬ್ ಸ್ಫೋಟ ಘಟನೆ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಈ ಘಟನೆಯಲ್ಲಿ ಸಾವುನೋವು ಸಂಭವಿಸಿಲ್ಲವಾದರೂ ಆರು ವಾಹನಗಳು ಜಖಂಗೊಂಡಿವೆ. ಇದು ಭದ್ರತೆಗೆ ಸವಾಲು ಎಂಬಂತಾಗಿದೆ.
ದೆಹಲಿಯ ಔರಂಗಜೇಬ್ ರಸ್ತೆಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯಿಂದ ಕೇವಲ 50 ಮೀಟರ್ ದೂರದಲ್ಲಿ ಸ್ಫೋಟ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸ್ಫೋಟವನ್ನು ಭಯೋತ್ಪಾದಕರು ನಡೆಸಿರಬಹುದೇ ಅಥವಾ ಇನ್ಯಾವುದೇ ಅಚಾತುರ್ಯದಿಂದ ಘಟನೆ ನಡೆದಿದೆಯೇ ಎಂಬ ಬಗ್ಗೆ ತಿಳಿಯಲು ಪೊಲೀಸರು ಪ್ರಯತ್ನ ನಡೆಸಿದ್ದಾರೆ.
ಅನುಮಾನಗಳ ಹುತ್ತ..
ದೆಹಲಿ ಸ್ಫೋಟ ಪ್ರಕರಣದ ಸುತ್ತ ಅನುಮಾನಗಳ ಹುತ್ತವೇ ಬೆಳೆದಿದೆ. ಗಣರಾಜ್ಯೋತ್ಸವ ದಿನದಂದು ರಾಜಧಾನಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಭಾರಿ ಸಂಖ್ಯೆಯಲ್ಲಿ ಪೊಲೀಸರು ಭದ್ರತೆಯಲ್ಲಿ ನಿಯೋಜಿತರಾಗಿದ್ದರು. ಸಂಶಯಾಸ್ಪದ ವ್ಯಕ್ತಿಗಳ ಬಗ್ಗೆ ನಿಗಾ ವಹಿಸಲಾಗಿತ್ತು. ಅದರಲ್ಲೂ ಸಂಸತ್ ಭವನ ಹಾಗೂ ರಾಷ್ಟ್ರಪತಿ ಭವನ ಕೂಡಾ ಘಟನಾ ಸ್ಥಳದಿಂದ ಕೂಗಳತೆ ದೂರದಲ್ಲಿದೆ. ಗಣರಾಜ್ಯೋತ್ವ ಸಮಾರಂಭಕ್ಕೆ ಸಮೀಪವಿರುವ ಈ ಸ್ಥಳಕ್ಕೆ ಸ್ಫೋಟಕ ಬಂದಿದ್ದಾದರೂ ಹೇಗೆ? ತಂದಿದ್ದಾದರೂ ಯಾರು ಎಂಬ ಪ್ರಶ್ನೆ ಭದ್ರತೆಗೂ ಸವಾಲೆಂಬಂತಾಗಿದೆ.
ಉದಯ ನ್ಯೂಸ್ ಜೊತೆ ಮಾಹಿತಿ ಹಂಚಿಕೊಂಡಿರುವ ಪೊಲೀಸ್ ಅಧಿಕಾರಿಗಳು, ಘಟನಾ ಸ್ಥಳದಲ್ಲಿ ಸಿಕ್ಕಿರುವ ಕೆಲವು ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದೆ. ಎನ್‌ಐಎ ಸಹಿತ ವಿವಿಧ ಸಂಸ್ಥೆಗಳೂ ಈ ಸ್ಫೋಟದ ತನಿಖೆಯತ್ತ ಗಮನ ಕೇಂದ್ರೀಕರಿಸಿರುವುದರಿಂದ ಕೃತ್ಯದ ನಿಗೂಢತೆ ಗೊತ್ತಾಗಲು ಹೆಚ್ಚು ಸಮಯ ಬೇಕಿಲ್ಲ ಎಂದಿದ್ದಾರೆ.
ಗಣರಾಜ್ಯೋತ್ಸವ ದಿನದಂದು ಕೆಂಪುಕೋಟೆ ಬಳಿ ರೈತರ ದಂಗೆ ಕೂಡಾ ಅಚಾನಕ್ ಆಗಿ ನಡೆದಿತ್ತು. ಇಂತಹಾ ಘಟನೆಗಳಲ್ಲಿ ಸಮಾಜಘಾತುಕ ಶಕ್ತಿಗಳ ಕೈವಾಡ ಇರುಬಹುದೆಂಬ ಸಂಶಯವೂ ಕಾಡಿದೆ. ಅದೇ ಹೊತ್ತಿಗೆ ಭೀಕರ ಬಾಂಬ್ ಸ್ಫೋಟಕ್ಕೆ ವಿಧ್ವಂಸಕರು ಸಂಚು ರೂಪಿಸಿರಬಹುದೇ? ಆ ಸಂಚು ಬದಲಾದ ಸಮಯದಲ್ಲಿ ಸ್ಫೋಟವಾಗಿರಬಹುದೇ ಎಂಬ ಅನುಮಾನ ಪೊಲೀಸರಲ್ಲಿ ವ್ಯಕ್ತವಾಗಿದೆ.