ಬೆಂಗಳೂರು: ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯತಿ ನೂತನ ಅಧ್ಯಕ್ಷರಾಗಿ ನಾರಾಯಣಗೌಡ ಅಧಿಕಾರ ಸ್ವೀಕರಿಸಿದರು. ಚುನಾವಣಾಧಿಕಾರಿ ಅರುಳ್ ಕುಮಾರ್ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿ ಅಧಿಕಾರ ಹಸ್ತಾಂತರ ಮಾಡಿದರು. ತಾಲ್ಲೂಕಿನ ಕೊನಘಟ್ಟ ಕ್ಷೇತ್ರದಿಂದ ನಾರಾಯಣಗೌಡ ಆಯ್ಕೆಯಾಗಿದ್ದರು.
ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷ ನಾರಾಯಣ ಗೌಡರು, ಶಾಸಕ ವೆಂಕಟರಮಣಯ್ಯ ಹಾಗೂ ಹಿರಿಯರಾದ ಆರ್.ಜಿ.ವೆಂಕಟಾಚಲಯ್ಯರವರು ನನ್ನ ಮೇಲೆ ನಂಬಿಕೆಯಿಟ್ಟು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಈ ಹಿಂದೆ ಅವಕಾಶ ಕೈ ತಪ್ಪಿದಾಗಲು ಕಾಂಗ್ರೆಸ್ ಕಾರ್ಯಕರ್ತನಾಗಿ ಪಕ್ಷದ ಹೇಳಿದಂತೆ ನಡೆದುಕೊಂಡಿದ್ದೆ. ಈಗ ವರಿಷ್ಠರೇ ನಮ್ಮನ್ನು ಗುರುತಿಸಿದ್ದಾರೆ. ಅಧಿಕಾರ ಶಾಶ್ವತ ಅಲ್ಲ. ಇದ್ದಷ್ಟು ದಿನ ಪ್ರಾಮಾಣಿಕವಾಗಿ ಕೆಲಸ ಮಾಡಿ ಜನರ ನಂಬಿಕೆ ಉಳಿಸಿಕೊಳ್ಳುವಂತ ಕೆಲಸ ಮಾಡುತ್ತೇನೆ ಎಂದರು.
ಅಧಿಕಾರಾವಧಿ ಕಡಿಮೆ ಇರುವು ಹಿನ್ನೆಲೆ ಎಲ್ಲಾ ಪಿಡಿಓಗಳ ಸಭೆ ಕರೆದು ಮೂಲಭೂತ ಸೌಕರ್ಯಗಳ ನಿರ್ವಹಣೆ ಹೆಚ್ಚಿನ ಗಮನ ಹರಿಸುತ್ತೇನೆ. ಯಾವುದೇ ಒತ್ತಡ ಅಥವಾ ಪ್ರಭಾವಕ್ಕೊಳಗಾಗದೆ ನಿಷ್ಟೇಯಿಂದ ಕೆಲಸ ಮಾಡುತ್ತೇನೆ ಎಂದರು.
ಹಿಂದುಳಿದ ವರ್ಗ ಕಡಗಣನೆ ಆರೋಪ:
ತಾ.ಪಂ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದ ಮತ್ತೋರ್ವ ಕಾಂಗ್ರೆಸ್ ಸದಸ್ಯ ಹಸನಘಟ್ಟ ರವಿ, ಶಾಸಕರು ಹಾಗೂ ವರಿಷ್ಠರು ಹಿಂದುಳಿದ ವರ್ಗವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ನಮ್ಮ ಒಂದು ವರ್ಗಕ್ಕೂ ಅವಕಾಶ ನೀಡಬೇಕಿತ್ತು ಎಂದು ನಾರಾಯಣ ಗೌಡ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಚುಂಚೇಗೌಡ, ಕೆಪಿಸಿಸಿ ಸದಸ್ಯ ಲಕ್ಷ್ಮೀಪತಿ, ಟಿಎಪಿಎಂಸಿಎಸ್ ಅಧ್ಯಕ್ಷ ಡಿ.ಸಿದ್ದರಾಮಯ್ಯ, ಕೊನಘಟ್ಟ ವಿಎಸ್ಎಸ್ಎನ್ ಉಪಾಧ್ಯಕ್ಷ ರಮೇಶ್, ತಾ.ಪಂ ಮಾಜಿ ಅಧ್ಯಕ್ಷ ಶ್ರೀವತ್ಸ, ಶಶಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೈರೇಗೌಡ ಸೇರಿದಂತೆ ಅನೇಕ ಮುಖಂಡರು ನಾರಾಯಣ ಗೌಡರಿಗೆ ಅಭಿನಂದಿಸಿದ್ದಾರೆ