ಬೆಂಗಳೂರು: ಭಾರತೀಯ ಕಂಪನಿಗಳು ತಯಾರಿಸಿದ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡೂ ಲಸಿಕೆಗಳನ್ನು ದೇಶದ 3 ಕೋಟಿ ಜನರಿಗೆ ಉಚಿತವಾಗಿ ನೀಡಲು ಸಿದ್ಧತೆ ಮಾಡಿಕೊಂಡಿದ್ದು, ಕೇಂದ್ರ ಸರ್ಕಾರವೇ ವೆಚ್ಚವನ್ನು ಭರಿಸಲಿದೆ. ರಾಜ್ಯದಲ್ಲಿ ಮೊದಲ ಹಂತದಲ್ಲಿ 16 ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡಲು ತಯಾರಿ ನಡೆದಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಈ ಕುರಿತು ಸಿದ್ದತೆಗಳನ್ನು ಪರಾಮರ್ಶೆ ಮಾಡಲಾಯಿತು. ರಾಜದಯವನ್ನು ಪ್ರತಿನಿಧಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ಡಾ.ಕೆ.ಸುಧಾಕರ್ ಕೂಡಾ ಮಾಹಿತಿ ಹಂಚಿಕೊಂಡರು.
ರಾಜ್ಯದಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಕೊರೊನಾ ಯೋಧರು, ಪೊಲೀಸರು, ಗ್ರಾಮೀಣಾಭಿವೃದ್ಧಿ ಸೇರಿದಂತೆ ಇತರೆ ಇಲಾಖೆಗಳ ಸಿಬ್ಬಂದಿ ಸೇರಿ 16 ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡಲು ಬಿಎಸ್ವೈ ಸರ್ಕಾರ ನಿರ್ಧರಿಸಿದೆ.
ಲಸಿಕೆಯ ಮೊದಲ ಡೋಸ್ ಪಡೆದ 28 ದಿನಗಳ ಬಳಿಕ ಮತ್ತೊಂದು ಡೋಸ್ ಪಡೆಯಬೇಕು ಎಂದು ತಿಳಿಸಲಾಗಿದೆ. ಅಂದರೆ, 45 ದಿನಗಳ ಬಳಿಕ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ. ಅಲ್ಲಿಯವರೆಗೆ ಎಚ್ಚರದಿಂದಿರಬೇಕಿದೆ ಎಂದು ಪ್ರಧಾನಿ ಸಲಹೆ ಮಾಡಿದ್ದು ಅದರಂತೆ ರಾಜ್ಯ ಸರ್ಕಾರವೂ ಕ್ರಮವಹಿಸಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಲಸಿಕೆಯ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ. ಈ ಲಸಿಕೆ ಸುರಕ್ಷಿತವಾಗಿದ್ದು, ಕ್ಲಿನಿಕಲ್ ಟ್ರಯಲ್ ಗಳನ್ನು ಮಾಡಲಾಗಿದೆ. ರಾಜ್ಯ ಸರ್ಕಾರ ಎಲ್ಲ ಬಗೆಯ ಸಿದ್ಧತೆಗಳನ್ನು ಮಾಡಿದ್ದು, ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ವಾಕ್- ಇನ್ ಫ್ರೀಜರ್ ನೀಡಲಿದೆ. ಲಸಿಕೆಯನ್ನು ಜಿಲ್ಲೆಗಳಿಗೆ ಕಳುಹಿಸಿಕೊಡಲಾಗುತ್ತದೆ. ಜನವರಿ 16 ರಿಂದ ಲಸಿಕೆಯ ವಿತರಣೆ ನಡೆಯಲಿದೆ ಎಂದರು.
ಆರೋಗ್ಯ ಸಿಬ್ಬಂದಿಗೆ ಲಸಿಕೆ ಕೊಟ್ಟ ಬಳಿಕ 50 ವರ್ಷ ಮೇಲ್ಪಟ್ಟವರು ಹಾಗೂ ಇತರೆ ರೋಗ ಇರುವವರನ್ನು ಗುರುತಿಸಿ ಅವರಿಗೆ ಲಸಿಕೆ ನೀಡಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ. ರಾಜ್ಯದಲ್ಲಿ ಲಸಿಕೆ ಸಂಗ್ರಹ ಮತ್ತು ವಿತರಣೆಗೆ ಸಿದ್ಧತೆ ಪೂರ್ಣಗೊಂಡಿದ್ದು, ಯಾವುದೇ ಲೋಪಗಳಾಗದಂತೆ ಎಚ್ಚರ ವಹಿಸಲಾಗಿದೆ ಎಂದರು.