ಬೆಂಗಳೂರು: ಕೊರೋನಾ ಸಂಕಷ್ಟಕ್ಕೆ ಸಿಲುಕಿರುವ ಕನ್ನಡ ಚಿತ್ರೋದ್ಯಮವು ಇದೀಗ ಸರ್ಕಾರದ ನೆರವನ್ನು ಯಾಚಿಸಿದೆ. ಈ ಸಂಬಂಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಡಿ.ಆರ್.ಜೈರಾಜ್ ಮತ್ತು ನಟ ಶಿವರಾಜ್ ಕುಮಾರ್ ನೇತೃತ್ವದ ನಿಯೋಗ ಬುಧವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚಿತ್ರೋದ್ಯಮದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿಕೊಂಡಿತು.
ಚಿತ್ರೋದ್ಯಮದ ಮಂದಿಗೆ ನೆರವು ನೀಡಲು ವಿಶೇಷ ಪ್ಯಾಕೇಜ್ ನೀಡಬೇಕು, ವಾರ್ಷಿಕ ತೆರೆಗೆ ಮನ್ನಾ ಮಾಡಬೇಕು. ಚಿತ್ರಮಂದಿರಗಳ ವಿದ್ಯುತ್ ಬಿಲ್ ಮನ್ನಾ ಮಾಡಬೇಕು, 2018 ಹಾಗೂ 2019ನೇ ಚಿತ್ರಗಳ ಸಬ್ಸಿಡಿ ಬಿಡುಗಡೆ ಮಾಡಬೇಕು ಇತ್ಯಾದಿ ಬೇಡಿಕೆಗಳನ್ನು ಈ ಚಿತ್ರೋದ್ಯಮದ ಗಣ್ಯರು ಸರ್ಕಾರದ ಮುಂದಿಟ್ಟರು.
ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದ ಟ್ವೀಟ್ ಮಾಡಿರುವ ನಟ ಶಿವರಾಜ್ ಕುಮಾರ್, ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಮ್ಮ ಬೇಡಿಕೆಗಳಿಗೆ ಸ್ಪಂಧಿಸುವ ಭರವಸೆ ನೀಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.