ಬೆಂಗಳೂರು: ದಕ್ಷಿಣ ಕನ್ನಡಕ್ಕೆ ವಿಶೇಷ ಟಾಸ್ಕ್ ಫೋರ್ಸ್ ಮಾಡುವ ಮೂಲಕ ರಾಜ್ಯ ಸರ್ಕಾರ ಹಿಂದೂಗಳನ್ನು ಟಾರ್ಗೆಟ್ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆರೋಪಿಸಿದ್ದಾರೆ..
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟಾಸ್ಕ್ ಫೋರ್ಸ್ ಮಾಡಿ, ಹಿಂದೂ ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಇದು ಕೋಮುವಾದದ ವಿರುದ್ಧ ಅಲ್ಲ, ಹಿಂದೂಗಳ ವಿರುದ್ಧ ಇರುವ ಫೋರ್ಸ್ ಎಂದರು.
ಈ ಹಿಂದೆ ಇದ್ದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಅವರಿಗೆ ಬೇಕಾದ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದಾರೆ. ಘಟನೆ ನಡೆದು ಎಷ್ಟೋ ದಿನಗಳಾದ ನಂತರ ಪ್ರಕರಣ ದಾಖಲಿಸಲಾಗುತ್ತಿದೆ. ಸುಳ್ಳು ಅಪಾದನೆ ಮಾಡಿ ಹಿಂದೂ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದರೆ, ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಅಶೋಕ್ ಎಚ್ಚರಿಕೆ ನೀಡಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕಾಂಗ್ರೆಸ್ ಪಕ್ಷದಿಂದ ಕರಾವಳಿ ಭಾಗಕ್ಕೆ ಹಣ ಬರುತ್ತಿಲ್ಲ. ಕಾಂಗ್ರೆಸ್‌ನ ಭಿಕ್ಷೆಯಿಂದ ಅಲ್ಲಿನ ಜನರು ಬದುಕುತ್ತಿಲ್ಲ. ಜನರ ಹಣದಲ್ಲೇ ಕಾಂಗ್ರೆಸ್ ನಾಯಕರು ಬದುಕುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಕರಾವಳಿ ಜನರ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.





































































