ಬೆಂಗಳೂರು:ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಅದಕ್ಕೆ ಸಂಬಂಧಿಸಿದಂತೆ ೨೦೦೨ ರಲ್ಲಿ ಕರ್ನಾಟಕದ ಅಂದಿನ ಸರ್ಕಾರ ಒಂದು ಆದೇಶ ಹೊರಡಿಸಿದೆ. ಅದನ್ನು ಸೌಹಾರ್ದಯುತವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಜಿಲ್ಲೆಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಸಭೆ ನಂತರ ಗಾಯತ್ರಿಪೀಠ ಮಹಾಸಂಸ್ಥಾನದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಈ ವಿಷಯದ ಕುರಿತು ಮಾತನಾಡಿದರು. ಸಾರ್ವಜನಿಕ ಧ್ವನಿವರ್ಧಕ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶವಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಶಿಫಾರಸ್ಸಿನನ್ವಯ ಕೇಂದ್ರ ಸರ್ಕಾರ ಆಜ್ಞೆ ಮಾಡಿದೆ. ಯಾವ ಸಂದರ್ಭಗಳಲ್ಲಿ ಹಾಗೂ ಧ್ವನಿವರ್ಧಕಗಳಲ್ಲಿ ಎಷ್ಟು ಪ್ರಮಾಣದ ಡೆಸಿಬಿಲ್ ಇರಬೇಕು ಎನ್ನುವ ಕೋಷ್ಟಕ ಇದೆ. 2000 ಇಸವಿಯಲ್ಲಿ ಕರ್ನಾಟಕ ಸರ್ಕಾರ ಈ ಆಜ್ಞೆಯ ಪಾಲನೆಗೆ ಆದೇಶವನ್ನು ಮಾಡಿತ್ತು. ಈ ರೀತಿ ಸುಪ್ರೀಂ ಕೋರ್ಟ್ ಆದೇಶ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಆದೇಶಗಳನ್ನು ಪರಿಪಾಲನೆ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಆದೇಶದ ಪರಿಪಾಲನೆಗೆ ಸೂಚನೆ :
ಆದೇಶದ ಅನುಷ್ಠಾನಕ್ಕಾಗಿ ಡಿವೈಎಸ್‍ಪಿ ದರ್ಜೆಯ ಅಧಿಕಾರಿಗಳಿರಬೇಕು, ವರ್ಷವಿಡೀ ಸಾರ್ವಜನಿಕ ಧ್ವನಿವರ್ಧಕ ಬಳಸುವವರು ಪರವಾನಗಿ ತೆಗೆದುಕೊಳ್ಳುವುದೂ ಸೇರಿದಂತೆ ಹಲವಾರು ವಿಚಾರಗಳು ಆದೇಶದಲ್ಲಿವೆ. ಆದೇಶದ ಈ ಎಲ್ಲ ಅಂಶಗಳ ಪರಿಪಾಲನೆಗೆ ಸೂಚನೆ ನೀಡಲಾಗಿದೆ. ಈ ಆದೇಶದ ಅನುಷ್ಠಾನಕ್ಕೆ ಸೂಕ್ತ ಮಾರ್ಗಸೂಚಿಯನ್ನು ನೀಡಲಾಗುವುದು ಎಂದರು.
ಧ್ವನಿವರ್ಧಕ ವಿಚಾರದಲ್ಲಿ ಯಾರೂ ಕೂಡ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಆದೇಶವನ್ನು ಎಲ್ಲರೂ ಪರಿಪಾಲನೆ ಮಾಡಬೇಕು. ಆಗ ಎಲ್ಲದ್ದಕ್ಕೂ ಪರಿಹಾರ ದೊರೆಯುತ್ತದೆ. ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇದೇ ರೀತಿಯ ಪಾಲನೆ ಆಗುತ್ತಿದೆ ಎಂದು ತಿಳಿಸಿದರು.