ಬೆಂಗಳೂರು: ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವವರು, ಸರ್ವಜನಾಂಗದ ಶಾಂತಿಯ ತೋಟದಲ್ಲಿ ವಿಷ ಬೀಜ ಬಿತ್ತಿ ಹಾಳು ಮಾಡಲು ಪ್ರಯತ್ನ ನಡೆಸುವವರು, ಧರ್ಮ ಧರ್ಮಗಳ ಮಧ್ಯೆ ದ್ವೇಷದ ಗೋಡೆ ಕಟ್ಟುತ್ತಿರುವವರು ಭಯೋತ್ಪಾದಕರು. ಅಂತಹ ಗೂಂಡಾಗಳನ್ನ, ಭಯೋತ್ಪಾದಕ ನಿಗ್ರಹ ಕಾಯ್ದೆಯಡಿ ಬಂಧಿಸಬೇಕೆಂಬ ನನ್ನ ಆಗ್ರಹದಲ್ಲಿ ಉಲ್ಟಾನೂ ಇಲ್ಲ, ಪಲ್ಟಿಯೂ ಇಲ್ಲ, ಕಾಂಗ್ರೆಸ್ ಪಕ್ಷದ ಸಿದ್ದಾಂತ ಹಾಗೂ ನನ್ನ ಹೇಳಿಕೆಗೆ ಬೆನ್ನು ತೋರಿಸುವ ಜಾಯಮಾನವೇ ನನ್ನ ರಾಜಕೀಯ ಇತಿಹಾಸದಲ್ಲಿ ಇಲ್ಲ. ನನ್ನ ಹೇಳಿಕೆ ಅತ್ಯಂತ ಸ್ಪಷ್ಟವಾಗಿದೆ ಅದಕ್ಕೆ ನಾನು ಈಗಲೂ ಬದ್ದ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.
ಶ್ರೀರಾಮ ಸೇನೆ ಸೇರಿದಂತೆ ಮತೀಯವಾದಿ ಸ್ವಯಂ ಘೋಷಿತ ಹಿಂದುತ್ವ ಪರ ಸಂಘಟನೆಗಳು (ಹಿಂದೂಪರ ಅಲ್ಲವೇ ಅಲ್ಲ) ಬಿಜೆಪಿ ಸರ್ಕಾರದ ಆಡಳಿತದಲ್ಲಿ ಬಾಲ ಬಿಚ್ಚಿವೆ. ಧರ್ಮ ಧರ್ಮದ ನಡುವೆ ದ್ವೇಷದ ಗೋಡೆ ಕಟ್ಟುವುದೇ ಈ ಸಂಘಟನೆಗಳ ಫುಲ್ ಟೈಂ ಡ್ಯೂಟಿ. ಹಿಜಾಬ್, ಹಲಾಲ್, ಆಜಾನ್ ಸೇರಿದಂತೆ ಅನೇಕ ವಿಷಯಗಳನಿಗೆ ಕೋಮು ಬಣ್ಣ ಕಟ್ಟಲಾಗುತ್ತಿದೆ. ಸರ್ಕಾರ ತನ್ನ ವೈಫಲ್ಯಗಳ ಮುಚ್ಚಲು ಶ್ರೀರಾಮಸೇನೆ, ಬಜರಂಗದಳದಂತಹ ಮತೀಯವಾದಿ ಸಂಘಟನೆಗಳಿಗೆ ಬೆಂಬಲ ನೀಡುತ್ತಿವೆ. ಸರ್ಕಾರದ 40% ಕಮಿಷನ್, ಅಕ್ರಮ ನೇಮಕಾತಿಯಲ್ಲಿ ನಡೆಯುತ್ತಿರುವ ಕೋಟಿ ಕೋಟಿ ಹಣ ಇಂತಹ ಸಂಘಟನೆಗಳ ಚಟುವಟಿಕೆಗಳಿಗೂ ಸಹಾಯವಾಗುತ್ತಿರುವುದರಲ್ಲಿ ಯಾವ ಅನುಮಾನವೂ ಇಲ್ಲ ಎಂದವರು ದೂರಿದ್ದಾರೆ.
ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದರಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಒಂದೆಡೆ ಭ್ರಷ್ಟಾಚಾರ ತಾಂಡವಾಡ್ತಿದ್ರೆ, ಇನ್ನೊಂದೆಡೆ ಕೋಮುವಾದಿ ಸಂಘಟನೆಗಳು ರಾಜ್ಯದ ಶಾಂತಿ ಕದಡಲು ವ್ಯವಸ್ಥಿತವಾಗಿ ಕಾರ್ಯಚಟುವಟಿಕೆ ನಡೆಸುತ್ತಿವೆ. ಆಜಾನ್ ವಿಷಯದಲ್ಲಿ ಸರ್ಕಾರ ಸುಪ್ರೀಂಕೋರ್ಟ್ ನ ನಿರ್ದೇಶನ ಪಾಲಿಸಲಿ ನಮ್ಮ ತಕರಾರಿಲ್ಲ. ಸಂವಿಧಾನದಡಿ ದೇಶದಲ್ಲಿ ಎಲ್ಲಾ ಧರ್ಮಗಳಿಗೂ ತಮ್ಮ ಧರ್ಮಕ್ಕೆ ಅನುಸಾರವಾಗಿ ಪ್ರಾಕ್ಟಿಸ್ ಮಾಡಲು ಹಕ್ಕಿದೆ. ಹನುಮಾನ್ ಚಾಲೀಸ್ ಪಠಣ ಮಾಡುವುದಕ್ಕೆ ಯಾರ ವಿರೋಧವೂ ಇಲ್ಲ, ಅವರವರ ಮನೆಗಳಲ್ಲಿ ಪಾಲಿಸಿಕೊಳ್ಳಲಿ. ಆದ್ರೆ ಮಸೀದಿ ಎದುರು ಪಠಣ ಮಾಡುತ್ತೇವೆ ಎಂದು ಹೇಳುವ ಕೋಮುಕ್ರಿಮಿಗಳನ್ನ ಒದ್ದು ಒಳಗೆ ಹಾಕದೆ ಭಜನೆ ಅವರ ಕೇಳಬೇಕಾ? ಎಂದವರು ಪ್ರಶ್ನಿಸಿದ್ದಾರೆ.
ಕಾನೂನು ಪಾಲಿಸುವುದು ಕಾಂಗ್ರೆಸ್ ಪಕ್ಷದ ಹುಟ್ಟಿನ ಇತಿಹಾಸದಿಂದಲೇ ಬಂದಿದೆ. ಕಿರಚಾಡುವವರಿಂದ ಕಲಿಯಬೇಕಿಲ್ಲ. ಒಂದಿಷ್ಟು ಮಾಧ್ಯಮಗಳು ನನ್ನ ಹೇಳಿಕೆಯನ್ನ ತಿರುಚಿ ಸುದ್ದಿ ಪ್ರಸಾರ ಮಾಡಿವೆ.ಅಂತಹ ಮಾಧ್ಯಮಗಳಿಂದ ಹೆಚ್ಚೇನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆದರೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಸಮಾಜವನ್ನ ತಪ್ಪು ದಾರಿಗೆ ಎಳೆಯುವುದು, ಧರ್ಮ ಧರ್ಮಗಳ ನಡುವೆ ದ್ವೇಷವನ್ನ ಕಟ್ಟಿ ಪ್ರಚೋದಿಸುವುದು ಬೇಡ ಎಂದವರು ಹೇಳಿದ್ದಾರೆ.