ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರ ದೇಶದ ಚರಿತ್ರೆಯಲ್ಲಿ ದಾಖಲಾಗುವಂತಹ ಕೆಲಸವನ್ನು ಸಂಸತ್ತಿನ ಉಭಯ ಸದನಗಳಲ್ಲಿ ಸ್ಪೀಕರ್ ಅವರಿಂದ ಮಾಡಿಸಿದೆ. ಈ ದೇಶದ ಐಕ್ಯತೆ, ಸಮಗ್ರತೆ, ಶಾಂತಿಗೆ ಭಂಗವಾಗುತ್ತಿದ್ದು, ಸಂಸತ್ ಭದ್ರತಾ ಲೋಪದ ಬಗ್ಗೆ ಸರ್ಕಾರ ಅಧಿಕೃತ ಹೇಳಿಕೆಯನ್ನು ಸದನದಲ್ಲಿ ನೀಡಬೇಕು ಎಂದು ಆಗ್ರಹಿಸಿದೆವು. ಈ ಬಗ್ಗೆ ಹೇಳಿಕೆ ನೀಡಲು ಅವರಿಂದ ಸಾಧ್ಯವಾಗದೇ ವಿರೋಧ ಪಕ್ಷಗಳ ಸಂಸತ್ ಸದಸ್ಯರನ್ನು ಅಮಾನತು ಮಾಡಿ ತಮಗೆ ಬೇಕಾದ ಮಸೂದೆ ಮಂಡನೆ ಮಾಡಿ ಅನುಮೋದನೆ ಪಡೆದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಅಪಮಾನ. ಈ ವಿಚಾರವಾಗಿ ಜನರ ಗಮನ ಸೆಳೆಯಲು ದೇಶದಾದ್ಯಂತ ಸಾಂಕೇತಿಕ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಾವು ಪ್ರಜಾಪ್ರಭುತ್ವ ಉಳಿಸಬೇಕು. ಲೋಕಸಭೆ ಚುನಾವಣೆವರೆಗೂ ನಮ್ಮ ಸರ್ಕಾರದ ಜನಪರ ಕಾರ್ಯಕ್ರಮ ಹಾಗೂ ಕೇಂದ್ರ ಸರ್ಕಾರದ ಜನವಿರೋಧಿ ಧೋರಣೆ, ಕೇಂದ್ರ ಸರ್ಕಾರದ ವೈಫಲ್ಯವನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಶವಂತಪುರದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಪಾಲಿಕೆ ವ್ಯಾಪ್ತಿಯ ಶಾಲೆಗಳ ವಿಚಾರವಾಗಿ ಸಭೆ ಕರೆದಿದ್ದು, ಈ ಘಟನೆ ಬಗ್ಗೆ ವರದಿ ತರಿಸಿಕೊಳ್ಳುತ್ತಿದ್ದು, ಇದರಲ್ಲಿ ತಪ್ಪಿತಸ್ಥರನ್ನು ಬಿಡುವುದಿಲ್ಲ. ಇತ್ತೀಚೆಗೆ ಕೋಲಾರದ ಶಾಲೆಯ ಘಟನೆಯಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ಮಕ್ಕಳನ್ನು ನಾವು ಯಾವ ರೀತಿ ನಡೆಸಿಕೊಳ್ಳಬೇಕೋ ಆ ರೀತಿ ನಡೆಸಿಕೊಳ್ಳಬೇಕು. ಮಕ್ಕಳನ್ನು ದುರುಪಯೋಗ ಮಾಡಿಕೊಳ್ಳುವಂತಿಲ್ಲ. ಶೌಚಾಲಯಗಳನ್ನು ಮಕ್ಕಳಿಂದ ಸ್ವಚ್ಛಗೊಳಿಸಲು ಅವಕಾಶ ನೀಡಿಲ್ಲ, ಮುಂದೆಯೂ ನೀಡುವುದಿಲ್ಲ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ಅವರು ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಅಜಿತ್ ಪವಾರ್ ಹಾಗೂ ಏಕನಾಥ ಶಿಂಧೆಯಂತಹವರು ಇದ್ದಾರೆ ಎಂದು ಹೇಳಿರುವ ಬಗ್ಗೆ ಕೇಳಿದಾಗ, “ಅವರು ಮೇಧಾವಿಗಳು. ಅವರಿಗೆ ಅನುಭವ ಹೆಚ್ಚಾಗಿದೆ. ಅವರಿಗೆ ಜೋತಿಷ್ಯ ಗೊತ್ತಿದೆ. ಅವರ ನುಡಿಮುತ್ತುಗಳನ್ನು ನಾವು ಸಂತೋಷದಿಂದ ಕೇಳುತ್ತಿದ್ದೇವೆ. ಅವರ ಬಾಯಿಗೆ ಬೀಗ ಹಾಕುವ ಶಕ್ತಿ ನನ್ನಲಿಲ್ಲ. ಅವರು ಮಾತನಾಡುತ್ತಿರಬೇಕು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ನಮ್ಮ ಪಕ್ಷ ಅಧಿಕಾರದಲ್ಲಿರುವುದನ್ನು ಅವರಿಂದ ಸಹಿಸಲಾಗುತ್ತಿಲ್ಲ. ಅವರಿಗೆ ಅಧಿಕಾರ ಸಿಗಲಿಲ್ಲ ಎಂಬ ಹತಾಶೆಯಿಂದ ಅವರು ಏನೆನೋ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ” ಎಂದರು.
ಬರದ ಸಮಯದಲ್ಲೂ ಮುಖ್ಯಮಂತ್ರಿಗಳು ಖಾಸಗಿ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ ಎಂಬ ವಿರೋಧ ಪಕ್ಷಗಳ ಟೀಕೆ ಬಗ್ಗೆ ಮಾಧ್ಯಮಗಳು ಕೇಳಿದಾಗ, “ಸಮಯ ಉಳಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳು ವಿಮಾನಗಳಲ್ಲಿ ಓಡಾಡುವುದು ಸಹಜ” ಎಂದರು.
ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗಳ ಭೇಟಿಗೆ ವಿರೋಧ ಪಕ್ಷಗಳ ನಾಯಕರನ್ನು ಕರೆದುಕೊಂಡು ಹೋಗಬೇಕಿತ್ತು ಎಂದು ಕೇಳಿದಾಗ, “ನಾವು ಸರ್ವಪಕ್ಷ ನಿಯೋಗವನ್ನು ಪ್ರಧಾನಿಗಳ ಬಳಿ ಕರೆದೊಯ್ಯಲು ಸಿದ್ಧವಿದ್ದೇವೆ. ಅವರು ಅಧಿಕಾರಿಗಳ ಭೇಟಿಗೆ ಸಮಯ ನೀಡಿಲ್ಲ” ಎಂದು ತಿಳಿಸಿದರು.
ಸಚಿವ ಸಂಪುಟ ಸಭೆಯಲ್ಲಿ ನೀರಿನ ದರ ಹೆಚ್ಚಳದ ಬಗ್ಗೆ ಕೇಳಿದಾಗ, “ಜನಸಾಮಾನ್ಯರ ಮನೆಗಳ ನೀರಿನ ದರ ಏರಿಕೆ ಆಗಿಲ್ಲ. 2018ರಲ್ಲಿ ತೆಗೆದುಕೊಂಡಿದ್ದ ನಿರ್ಧಾರಕ್ಕೆ ಹೈಕೋರ್ಟ್ ನಲ್ಲಿ ತಡೆಯಾಜ್ಞೆ ಇತ್ತು. ಹೀಗಾಗಿ 2018ರಲ್ಲಿ ನಿಗದಿ ಮಾಡಿದಂತೆ ಕೈಗಾರಿಕೆಗಳ ನೀರಿನ ದರ ಏರಿಕೆ ಮಾಡಲಾಗಿದೆ. 2013ರಿಂದ ಇಲ್ಲಿಯವೆಗೂ ಕಳೆದ 10 ವರ್ಷಗಳಿಂದ ಬೆಂಗಳೂರಿನ ಜನಸಾಮಾನ್ಯರ ಬಳಕೆ ನೀರಿನ ದರವನ್ನು ಏರಿಕೆ ಮಾಡಿಲ್ಲ. ಈಗ 2018ರ ಕಾನೂನನ್ನು ಸಕ್ರಮ ಮಾಡಿದ್ದೇವೆ” ಎಂದು ತಿಳಿಸಿದರು.





































































