ಬೆಂಗಳೂರು: ನಕ್ಸಲ್ ಮುಖಂಡ ವಿಕ್ರಂ ಗೌಡ ನಕಲಿ ಎನ್ಕೌಂಟರ್ಗೆ ಬಲಿಯಾಗಿಲ್ಲ, ಅದು ನಿಜವಾದ ಘಟನೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಕ್ಸಲ್ ವಿಕ್ರಂಗೌಡ ಚಟುವಟಿಕೆಗಳ ಮೇಲೆ ಕಳೆದ 20 ವರ್ಷಗಳಿಂದ ನಿಗಾವಹಿಸಲಾಗಿತ್ತು. ಜನ ವಿರೋದಿ ಕೆಲಸಗಳಲ್ಲಿ ತೊಡಗಿದ್ದ ಎಂಬ ಮಾಹಿತಿ ಇದೆ ಎಂದು ಹೇಳಿದರು.
ಕಾನೂನು ಬಾಹಿರವಾಗಿ, ಅನುಮತಿ ಇಲ್ಲದೆ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ. ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿದ್ದ. ನಕ್ಸಲ್ ನಿಗ್ರಹಕ್ಕಾಗಿ ರಾಜ್ಯದಲ್ಲಿ ಮತ್ತು ಬೇರೆಬೇರೆ ರಾಜ್ಯಗಳಲ್ಲಿ ನಕ್ಸಲ್ ನಿಗ್ರಹ ಪಡೆಯನ್ನು ರಚಿಸಲಾಗಿದೆ. ನಕ್ಸಲ್ ಚಟುವಟಿಕೆ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ. ವಿಕ್ರಂ ಗೌಡ ಅವರದ್ದು ನಕಲಿ ಎನ್ಕೌಂಟರ್ ಅಲ್ಲ ಎಂದರು.
ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದವರಿಗೆ ಶರಣಾಗುವಂತೆ ವಿಚಾರವಾದಿಗಳು ಮನವಿ ಮಾಡಿದ್ದಾರೆ. ಇದು ಸರಿ ಇಲ್ಲ. ಸಮಾಜದಲ್ಲಿ ನ್ಯಾಯಯುತವಾಗಿ ಪ್ರತಿಭಟನೆ ಮಾಡಿ, ನಕ್ಸಲ್ ಚಟುವಟಿಕೆಗೆ ಸೇರಬೇಡಿ ಎಂದಿದ್ದಾರೆ. ನಕ್ಸಲರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.