ಬೆಂಗಳೂರು: ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡಿದ ಬಳಿಕ ಆಯೋಗದ ಕಚೇರಿಗೆ ಭೇಟಿ ನೀಡದೆ, ಯಾವುದೇ ದಾಖಲೆಗಳನ್ನು ಸಲ್ಲಿಸದೇ “ಹಿಟ್ ಅಂಡ್ ರನ್” ಪದ್ದತಿ ಪಾಲಿಸಿರುವುದಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಟೀಕಿಸಿದ ಅವರು, “ಸಾರ್ವಜನಿಕವಾಗಿ ದೊಡ್ಡ ದೊಡ್ಡ ಸುಳ್ಳು ಹೇಳಿಕೆಗಳನ್ನು ನೀಡುವ ರಾಹುಲ್, ಸಾಕ್ಷಿ ಕೇಳಿದರೆ ಮಾಯವಾಗುತ್ತಾರೆ. ಗುರುವಾರ ಮತಗಳ್ಳತನದ ಆರೋಪ ಮಾಡಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರೂ, ಆಯೋಗದ ಕಚೇರಿಗೆ ತೆರಳಿಲ್ಲ. ಫ್ರೀಡಂ ಪಾರ್ಕ್‌ನಿಂದ ಆಯೋಗದ ಕಚೇರಿಗೆ 5 ನಿಮಿಷ ನಡೆದು ಹೋಗಬಹುದು. ಬದಲಾಗಿ, ಬೇರೆವರನ್ನು ಕಳುಹಿಸಿದ್ದಾರೆ” ಎಂದು ವ್ಯಂಗ್ಯವಾಡಿದರು.
“ಆರೋಪ ಮಾಡಿ ಇನ್ನೊಬ್ಬರಿಂದ ಉತ್ತರ ಕೊಡಿಸುವುದು, ಸುಳ್ಳಿಗೆ ಆಧಾರವಿಲ್ಲವೆಂಬುದರ ಪುರಾವೆ. ರಾಜ್ಯ ಚುನಾವಣಾ ಆಯೋಗ ಅಫಿಡವಿಟ್ ಕೇಳಿದೆ, ಇದುವರೆಗೂ ಫೈಲ್ ಮಾಡಿಲ್ಲ” ಎಂದು ಹೇಳಿದರು.
ರಾಹುಲ್ ಗಾಂಧಿಯವರ ರಾಜಕೀಯವನ್ನು ಟೀಕಿಸಿದ ಪ್ರಲ್ಹಾದ್ ಜೋಶಿ, “ಸರ್ಕಾರದಲ್ಲಿ ಇದ್ದಾಗ ಲೂಟಿಯ ಅಂಗಡಿ, ಚುನಾವಣೆಯ ವೇಳೆ ಪ್ರೀತಿಯ ಅಂಗಡಿ, ಅಧಿಕಾರ ಕಳೆದುಕೊಂಡ ಬಳಿಕ ಸುಳ್ಳಿನ ಅಂಗಡಿ ತೆಗೆಯುವವರು ರಾಹುಲ್. ಇವರ ಅಜ್ಜಿ ತುರ್ತು ಪರಿಸ್ಥಿತಿ ಹೇರಿದವರು. ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಮನಬಂದಂತೆ ಮಾತನಾಡುತ್ತಿದ್ದಾರೆ” ಎಂದು ಆರೋಪಿಸಿದರು.