ಬೆಂಗಳೂರು: ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಮರನಾಮಕರಣ ಮಾಡುವ ಪ್ರಸ್ತಾವನೆಯನ್ನು ರಾಜ್ಯ ಸಚಿವ ಸಂಪುಟ ಅನುಮೋದಿಸಿದೆ.
ರಾಜ್ಯ ಸಚಿವ ಸಂಪುಟ ಸಭೆಯ ನಂತರ ಸಭೆಯ ನಿರ್ಣಯ ಕುರಿತು ವಿವರಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ್, ಬ್ರ್ಯಾಂಡ್ ಬೆಂಗಳೂರು ಮೂಲಕ ಸೇರ್ಪಡೆ (Inclusive Growth) ಅಭಿವೃದ್ಧಿಯ ಕಲ್ಪನೆಗಳನ್ನು ಸಾಕಾರಗೊಳಿಸುವ ಸದುದ್ದೇಶದಿಂದ ಈ ಹೊಸ ನಾಮಕರಣ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ತಿಳಿಸಿದರು.
ರಾಜ್ಯ ಸಚಿವ ಸಂಪುಟದ ಇತರ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದ ಅವರು 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಒಂದು ಬಾರಿಗೆ ವಯೋಮಿತಿಯ ನಿರ್ಬಂಧವನ್ನು ಸಡಿಲಿಸಿ ಹೆಚ್ಚುವರಿ ವಿಶೇಷ ಅವಕಾಶವನ್ನು ನೀಡುವ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಪ್ರಸ್ತಾಪಿಸಿತ್ತು. ಪ್ರಸ್ತಾಪಕ್ಕೆ ದಿನಾಂಕ: 21.06.2024ರ ಸರ್ಕಾರಿ ಆದೇಶಕ್ಕೆ ಸಚಿವ ಸಂಪುಟ ಘಟನೋತ್ತರ ಅನುಮೋದನೆ ನೀಡಿದೆ. 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಹುದ್ದೆಯ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳು ಇದು ಅನ್ವಯವಾಗುತ್ತದೆ ಎಂದು ತಿಳಿಸಿದರು.
ಪದವಿ ಪೂರ್ವ ಕಾಲೇಜು ಉಪನ್ಯಾಸಕರುಗಳ ಹುದ್ದೆಗೆ ಬಡ್ತಿ ಹೊಂದಲು ಪ್ರೌಢ ಶಾಲಾ ಶಿಕ್ಷಕರಿಗೆ ಸ್ನಾತಕೋತ್ತರ ಪದವಿಯಲ್ಲಿ ಶೇ.55 ರಷ್ಟು ಅಂಕಗಳನ್ನು ನಿಗದಿಪಡಿಸಿರುವುದನ್ನು ಪರಿಷ್ಕರಿಸಿ ಕನಿಷ್ಠ ಶೇ.50 ರಷ್ಟು ಅಂಕಗಳನ್ನು ನಿಗದಿಪಡಿಸಲು ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಥವಾ ಕೇಂದ್ರಿಕೃತ ದಾಖಲಾತಿ ಘಟಕ ಅಥವಾ ಕರ್ನಾಟಕ ಲೋಕಸೇವಾ ಆಯೋಗಗಳನ್ನು ಉಪನ್ಯಾಸಕರ ವೃಂದದ ಆಯ್ಕೆ ಪ್ರಾಧಿಕಾರವೆಂದು ನಿಗದಿಪಡಿಸಲು ಮತ್ತು ಉಪನ್ಯಾಸಕ ವೃಂದದ ನೇರ ನೇಮಕಾತಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಮಾತ್ರ ಕನಿಷ್ಠ ಶೇ.50 ರಷ್ಟು ಅಂಕಗಳನ್ನು ನಿಗದಿಪಡಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಸ್ತಾವನೆಯನ್ನು ಸಚಿವ ಸಂಪುಟವು ಒಪ್ಪಿದೆ ಎಂದು ಸಚಿವರು ತಿಳಿಸಿದರು.
ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯದ ಕೆಳಭಾಗದಲ್ಲಿನ 198 ಎಕರೆ ಜಾಗದಲ್ಲಿ ಉದ್ಯಾನವನ ಸೌಂದರ್ಯೀಕರಣ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದ್ದು, ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲು ಈಗಾಗಲೇ ನೀಡಿರುವ ಅನುಮೋದನೆಯಂತೆ ಟೆಂಡರ್ ಕರೆಯುವ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದಿಸಿದೆ. ಕೃಷ್ಣರಾಜಸಾಗರ ಆಣೆಕಟ್ಟೆಯ ಬೃಂದಾವನ ಉದ್ಯಾನವನವನ್ನು ವಿಶ್ವದರ್ಜೆಗೆ ಉನ್ನತೀಕರಣಗೊಳಿಸುವ ಕಾಮಗಾರಿಗಳ ವಿಸ್ತೃತ ಯೋಜನಾ ವರದಿಯನ್ನು ಆರ್ಥಿಕ ಇಲಾಖೆ, ಯೋಜನಾ ಇಲಾಖೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯು ನೀಡಿರುವ ಅಭಿಪ್ರಾಯದನ್ವಯ ಪರಿಷ್ಕರಿಸಿ ಟೆಂಡರ್ ಮುಖಾಂತರ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಚೌಕಟ್ಟಿನಲ್ಲಿ ಅನುಷ್ಠಾನಗೊಳಿಸಲು; ಸಚಿವ ಸಂಪುಟ ನಿರ್ಣಯಿಸಿದೆ. ಒಟ್ಟು ಯೋಜನಾ ವೆಚ್ಚ ರೂ.2663.74 ಕೋಟಿ. 34.5 ವರ್ಷಗಳ ಒಟ್ಟು ರಿಯಾಯಿತಿ ಅವಧಿಯು 4.5 ವರ್ಷಗಳ ರಿಯಾಯಿತಿ ಅವಧಿಯು ಸೇರಿದೆ. ಮಾಸ್ಟರ್ ಪ್ಲಾನ್ನಲ್ಲಿ ಒಟ್ಟು 45 ಘಟಕಗಳನ್ನು ಪರಿಗಣಿಸಲಾಗಿದೆ ಎಂದು ಸಚಿವರು ವಿವರ ನೀಡಿದರು.