ಬೆಂಗಳೂರು: ರಾಜ್ಯದ ಪ್ರತಿ ಮನೆಗೆ ಪ್ರತಿ ತಿಂಗಳು 200 ಯುನಿಟ್ ಉಚಿತ ವಿದ್ಯುತ್ ಯೋಜನೆ ಜಾರಿ. ಇದು ಚುನಾವಣೆಗೆ ಮುನ್ನವೇ ಕಾಂಗ್ರೆಸ್ ಮಾಡಿರುವ ಘೋಷಣೆ.
ಈ ಕುರಿತಂತೆ ಕಾಂಗ್ರೆಸ್ ಪಕ್ಷ ನೀಡಿರುವ ಮಾಧ್ಯಮ ಪ್ರಕಟಣೆ ಗಮನಸೆಳೆದಿದೆ. ರಾಜ್ಯದ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡು ನುಡಿದಂತೆ ನಡೆಯುತ್ತಾ ಬಂದಿರುವ, ಸುಭದ್ರ ಆಡಳಿತದ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಕಾಂಗ್ರೆಸ್ ಪಕ್ಷವೇ ಮತ್ತೆ ಅಧಿಕಾರಕ್ಕೆ ಬರಬೇಕೆಂದು ಒಮ್ಮನಸ್ಸಿನಿಂದ ನಮ್ಮ ಜನ ಬಯಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಜನ ಸಾಮಾನ್ಯರ ಬಳಿಗೆ ಹೋಗಿ, ಅವರ ಸಂಕಷ್ಟಗಳನ್ನು ಅವರಿಂದಲೇ ಅರಿತು ಅವುಗಳಿಗೆ ಪರಹಾರ ನೀಡುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ಕಾಂಗ್ರೆಸ್ ಪಕ್ಷ ರಾಜ್ಯದ ಮನೆ ಮನೆಗಳಿಗೆ ಭೇಟಿ ನೀಡಿದಾಗ ಜನರು ಕೊರೋನಾ ನಂತರ ಜೀವನೋಪಾಯಕ್ಕೆ ಸಾಕಷ್ಟು ಕಷ್ಟ ಪಡ್ಡುತ್ತಿರುವುದು, ಪೆಟ್ರೋಲ್, ಡೀಸೆಲ್, LPG ಸಿಲೆಂಡರ್ ಸೇರಿದಂತೆ ಅಗತ್ಯ ವಸ್ತುಗಳ ನಿರಂತರ ಬೆಲೆಯೇರಿಕೆಯಿಂದಾಗಿ ತಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭಾಸ ಒದಗಿಸಲು ಕಷ್ಟ ಪಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇವೆಲ್ಲದರ ಜೊತೆ ಬಿಜೆಪಿ ಸರ್ಕಾರ ನಿರಂತರವಾಗಿ ವಿದ್ಯುತ್ ದರ ಏರಿಕೆ ಮಾಡುತ್ತಿರುವ ಹಾಗೂ ಅದರಿಂದ ತಮಗೆ ಆಗುತ್ತಿರುವ ತೊಂದರೆಗಳನ್ನು ಜನ ಹಂಚಿಕೊಂಡಿದ್ದರು. ಜನರ ಈ ಸಂಕಷ್ಟವನ್ನು ಅರಿತ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಪ್ರತಿ ಮನೆಗೂ ಪ್ರತಿ ತಿಂಗಳು 200 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲು ಗೃಹಜ್ಯೋತಿ ಯೋಜನೆಯನ್ನು ಜಾರಿಗೊಳಿಸಲು ತೀರ್ಮಾನಿಸಿದೆ ಎಂದು ಪಕ್ಷ ಹೇಳಿದೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಈಗಾಗಲೇ ಈ ಮಾದರಿಯ ಯೋಜನೆಯನ್ನು ಜಾರಿಗೆ ತಂದಿದ್ದು, ಅದೇ ಮಾದರಿಯಲ್ಲಿ ರಾಜ್ಯದಲ್ಲೂ ಯೋಜನೆ ಜಾರಿ ತಂದು ವಿದ್ಯುತ್ ದರ ಏರಿಕೆಯಿಂದ ತತ್ತರಿಸಿರುವ ಜನರಿಗೆ ನೆರವಾಗುವ ತೀರ್ಮಾನವನ್ನು ಕಾಂಗ್ರೆಸ್ ಪಕ್ಷ ಕೈಗೊಂಡಿದೆ ಎಂದು ಈ ಪ್ರಕಟಣೆಯಲ್ಲಿ ಹೇಳಲಾಗಿದೆ.












































































