ಚಿಕ್ಕಮಗಳೂರು: ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಸಮಾರಂಭ, ಗುಂಪುಗಳ ನಡುವಿನ ಸಮರದಿಂದಾಗಿ ಗೊಂದಲದ ಗೂಡಾಗುತ್ತಿದೆ. ಚಿಕ್ಕಮಗಳೂರಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲೂ ಯುವ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಪ್ರತಿಷ್ಟೆಯ ಕಾದಾಟ ನಡೆದಿದ್ದು ಪರಿಸ್ಥಿತಿ ನಿಯಂತ್ರಿಸಲು ನಾಯಕರು ಪರದಾಡುವಂತಾಯಿತು. ಈ ಘಟನೆಯಿಂದ ಬೇಸತ್ತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಅವರು ರಾಜೀನಾಮೆಗೆ ಮುಂದಾದ ಪ್ರಸಂಗವೂ ನಡೆದಿದೆ.
ಚಿಕ್ಕಮಗಳೂರು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಯುವ ಕಾಂಗ್ರೆಸ್ ಮುಖಂಡರ ನಡುವೆ ವಾಗ್ವಾದ ಏರ್ಪಟ್ಟಿದೆ. ಈ ಸಂದರ್ಭದಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಮಾರಾಮಾರಿಯಲ್ಲಿ ತೊಡಗಿದರು.
ಚಿಕ್ಕಮಗಳೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಮತ್ತು ಕಾರ್ಯದರ್ಶಿ ನಿತೀಶ್ ಬೆಂಬಲಿಗರ ಗುಂಪುಗಳ ಸಂಘರ್ಷ ನಡೆದಿದ್ದು, ಇತ್ತೀಚೆಗೆ ಪದಚ್ಯುತರಾಗಿದ್ದ ಕಾರ್ಯದರ್ಶಿ ನಿತೀಶ್ ಆಪ್ತರು ನಾಯಕರ ತೀರ್ಮಾನದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ವಾಗ್ವಾದ ವಿಕೋಪಕ್ಕೆ ತಿರುಗಿ ಎರಡು ಗುಂಪುಗಳ ಮಧ್ಯೆ ಹೊಡೆದಾಟ ನಡೆದಿದೆ ಎನ್ನಲಾಗಿದೆ.







































































