ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಭೇಟಿ ಸಂದರ್ಭದ ಕೋಟ್ಯಾಂತರ ರೂಪಾಯಿ ಖರ್ಚನ್ನು ಕೇಂದ್ರವೇ ಭರಿಸಲಿ ಎಂದು ಕಾಂಗ್ರೆಸ್ ಪಟ್ಟು ಹಿಡಿದಿದೆ.
ಬೆಂಗಳೂರಿನಲ್ಲಿ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು, ರಾಜ್ಯ ಸರ್ಕಾರ ಹಾಗೂ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಒಂದು ತಿಂಗಳಿಂದ ನಿರಂತರವಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಚುನಾವಣೆ ಪ್ರಕ್ರಿಯೆ ಆರಂಭವಾದ ನಂತರ ಮೋದಿ ಅವರು ಲಕ್ಷ ಕೋಟಿ ಮೊತ್ತದ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ಹಿಂದೆ ಬೇರೆ ರಾಜ್ಯಗಳಲ್ಲಿ ಚುನಾವಣೆ ಸಂದರಭದಲ್ಲಿ ಇಂತಹ ಪ್ಯಾಕೇಜ್ ಘೋಷಣೆಯಾಗಿದ್ದು, ಯಾವುದೂ ಜಾರಿ ಆಗಲೇ ಇಲ್ಲ ಎಂದು ಲಕ್ಷಣ್ ಜಟು ಟೀಕೆ ಮಾಡಿದರು.
ಚುನಾವಣೆ ನೀತಿ ಸಂಹಿತೆ ಜಾರಿಯಾದ ನಂತರ ಅವರು ಪಕ್ಷದ ನಾಯಕರಾಗಿ ಪ್ರವಾಸ ಮಾಡುತ್ತಿಲ್ಲ. ಅವರು ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಸರ್ಕಾರ ಅವರ ಕಾರ್ಯಕ್ರಮಕ್ಕೆ ಹಣ ವ್ಯಯ ಮಾಡುತ್ತಿದೆ. ಕೆಂಪೇಗೌಡ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ 30 ಕೋಟಿ ಖರ್ಚು ಮಾಡಿದ್ದಾರೆ. ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ 25 ಕೋಟಿ, ಬೆಂಗಳೂರು ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಉದ್ಘಾಟನೆಗೆ ಬಂದಾಗ 9 .36 ಕೋಟಿ ವೆಚ್ಚ ಮಾಡಿದ್ದಾರೆ. ಇದೆಲ್ಲವನ್ನು ರಾಜ್ಯ ಸರ್ಕಾರ ಭರಿಸುತ್ತಿದ್ದು, ರಾಜ್ಯ ಜನರ ತೆರಿಗೆ ಹಣ ಯಾಕೆ ವೆಚ್ಚ ಮಾಡಬೇಕು. ಕೇಂದ್ರ ಸರ್ಕಾರವೇ ಇದಕ್ಕೆ ವೆಚ್ಚ ಮಾಡಲಿ. ಮೋದಿ ಅವರು ಬಂದು ಉದ್ಘಾಟನೆ ಮಾಡಿರುವ ಎಲ್ಲಾ ಕಾಮಗಾರಿಗಳು ಅಪೂರ್ಣ ಕಾಮಗಾರಿಗಳೇ. ಅವರು ಬಂದಾಗ ಪ್ರತ್ಯೇಕ ರಸ್ತೆ, ಹೆಲಿಪ್ಯಾಡ್, ಅತಿಥಿ ಗೃಹ ನಿರ್ಮಿಸುತ್ತಿದ್ದಾರೆ ಎಂದು ಲಕ್ಷ್ಮಣ್ ಬೊಟ್ಟು ಮಾಡಿದರು.
ಕಳೆದ ಒಂದು ವಾರದಿಂದ ಅಮೂಲ್ ಹಾಗೂ ನಂದಿನಿ ವಿಲೀನ ವಿರೋಧಿಸಿ ಸಾಕಷ್ಟು ಹೋರಾಟ ನಡೆಸುತ್ತಿದ್ದಾರೆ. ಕಳೆದ 3 ವರ್ಷಗಳಿಂದ ನಂದಿನಿಯನ್ನು ಅಮೂಲ್ ಜತೆ ವಿಲೀನ ಮಾಡಲು ಪ್ರಯತ್ನ ಮಾಡುತ್ತಿದ್ದು, ಅಮೂಲ್ ಜತೆ ವ್ಯಾಪಾರ ಮಾಡಲು ನಂದಿನಿ ಸಂಸ್ಥೆ ಒಪ್ಪಿಗೆ ನೀಡಿರುವ ಪತ್ರವನ್ನು ಅವರಿಗೆ ಈಗಾಗಲೇ 2021ರಲ್ಲೇ ನೀಡಲಾಗಿದೆ. ಈ ಪತ್ರವನ್ನು ಇವರು ಬಹಿರಂಗಪಡಿಸುತ್ತಿಲ್ಲ. ಇದೆಲ್ಲ ಆದ ನಂತರವಷ್ಟೇ ಅವರು ರಾಜ್ಯದಲ್ಲಿ ಅವರು ರಾಜ್ಯಕ್ಕೆ ಲಗ್ಗೆ ಇಡುತ್ತಿದ್ದಾರೆ ಎಂದು ಆರೋಪಿಸಿದ ಲಕ್ಷ್ಮಣ್, ನಂದಿನಿ ಸಂಸ್ಥೆಯನ್ನು ಮುಳುಗಿಸಿ ಅಮೂಲ್ ಇದನ್ನು ವಶಪಡಿಸಿಕೊಳ್ಳಲು ಹುನ್ನಾರ ಮಾಡಲಾಗುತ್ತಿದೆ. ಇವರು ನಮ್ಮ ರಾಜ್ಯದ ಮೂರು ಬ್ಯಾಂಕುಗಳನ್ನು ವಿಲೀನ ಮಾಡುವ ಸಂದರ್ಭದಲ್ಲಿ ಈ ಬ್ಯಾಂಕ್ ಆರಂಭಿಸಿದ ಕುಟುಂಬದ ಸದಸ್ಯರನ್ನಾಗಲಿ, ಆ ಬ್ಯಾಂಕಿನ ಟ್ರಸ್ಟ್ ಸದಸ್ಯರನ್ನಾಗಲಿ ಕೇಳಿದ್ದರಾ? ಸಂಸತ್ತಿನಲ್ಲೂ ಚರ್ಚೆ ಮಾಡದೇ ಸುಗ್ರೀವಾಜ್ಞೆ ಮೂಲಕ ಲಾಭದಾಯಕ ಬ್ಯಾಂಕ್ ಗಳಾದ ಎಸ್ ಬಿಎಂ, ಸಿಡಿಕೇಟ್ ಬ್ಯಾಂಕ್ ಹಾಗೂ ವಿಜಯಾ ಬ್ಯಾಂಕ್ ಗಳನ್ನು ವಿಲೀನ ಮಾಡಿದರು. ಈ ಬ್ಯಾಂಕ್ ಗಳು 21 ಲಕ್ಷ ಕೋಟಿ ಮೌಲ್ಯಗಳ ಬ್ಯಾಂಕ್ ಗಳಾಗಿದ್ದವು. ಇದೆಲ್ಲವನ್ನು ಬ್ಯಾಂಕ್ ಆಫ್ ಬರೋಡಾ ಹಾಗೂ ಇತರೆ ಬ್ಯಾಂಕುಗಳಿಗೆ ವಿಲೀನ ಮಾಡಿದರು ಎಂದು ದೂರಿದರು. ನಷ್ಟ ಅನುಭವಿಸುತ್ತಿದ್ದ ಬ್ಯಾಂಕ್ ಗಳನ್ನು ಲಾಭದಾಯಕ ಬ್ಯಾಂಕ್ ಗಳ ಜತೆ ವಿಲೀನ ಮಾಡಬೇಕೇ ಹೊರತು, ಲಾಭದಾಯಕ ಬ್ಯಾಂಕುಗಳನ್ನು ನಷ್ಟದ ಬ್ಯಾಂಕ್ ಜತೆ ವಿಲೀನ ಮಾಡುವುದು ಎಷ್ಟು ಸರಿ? ಈಗ ನಂದಿನಿ ಹಾಗೂ ಅಮೂಲ್ ವಿಲೀನದ ಹಿಂದೆ ಮತ್ತಷ್ಟು ಹಿನ್ನೆಲೆಗಳಿವೆ ಎಂದವರು ಹೇಳಿದರು.




















































