ದೆಹಲಿ: ಮಿನಿ ಮಹಾಸಮರ ಎಂದೇ ಕದನ ಕೌತುಕದ ಅಖಾಡವೆನಿಸಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಯೋಗಿ ಹಾಗೂ ಮೋದಿಗೆ ಅಗ್ನಿ ಪರೀಕ್ಷೆ ಎನಿಸಿರುವ ಉತ್ತರ ಪ್ರದೇಶ ಚುನಾವಣೆ ಈ ಬಾರಿ ಕೋವಿಡ್ ಆತಂಕಕಾರಿ ಸನ್ನಿವೇಶದ ನಡುವೆ ಘೋಷಣೆಯಾಗಿದೆ.
ಉತ್ತರ ಪ್ರದೇಶ, ಪಂಜಾಬ್, ಮಣಿಪುರ, ಉತ್ತರಾಖಂಡ ಮತ್ತು ಗೋವಾ ವಿಧಾನಸಭೆಗಳಿಗೆ ಕೇಂದ್ರ ಚುನಾವಣಾ ಆಯೋಗ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದೆ.
ದೆಹಲಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ, ಮತಸಮರ ಏರ್ಪಟ್ಟಿರುವ ಐದೂ ರಾಜ್ಯಗಳಲ್ಲಿ ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಘೋಷಿಸಿದರು.
ಫೆಬ್ರವರಿ 10 ರಂದು ಮೊದಲ ಹಂತದ ಮತದಾನ ನಡೆಯಲಿದೆ. 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಮತಗಳ ಎಣಿಕೆ ನಡೆಯಲಿದೆ ಎಂದು ಅವರು ತಿಳಿಸಿದರು.