ನವದೆಹಲಿ: “ಕಳೆದ 24 ಗಂಟೆಗಳಲ್ಲಿ 300 ಕ್ಕೂ ಹೆಚ್ಚು ಮಾವೋವಾದಿಗಳು ಶರಣಾಗಿದ್ದಾರೆ. ಒಂದು ಕಾಲದಲ್ಲಿ ಬಾಂಬ್ ಸ್ಫೋಟಗಳು ಮತ್ತು ಹತ್ಯೆಗಳ ನೆಲವಾಗಿದ್ದ ಪ್ರದೇಶದಲ್ಲಿ ಈಗ ʻಒಲಿಂಪಿಕ್ಸ್ʼ ಕ್ರೀಡಾಕೂಟದ ತಯಾರಿ ನಡೆಯುತ್ತಿದೆ. ಇದು ದೇಶದ ಶಾಂತಿ ಮತ್ತು ಅಭಿವೃದ್ಧಿಯ ದಿಕ್ಕಿನಲ್ಲಿ ದೊಡ್ಡ ಬದಲಾವಣೆಯ ಸಂಕೇತ,” ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ವಿಶ್ವ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಕಳೆದ 50–55 ವರ್ಷಗಳಲ್ಲಿ ಮಾವೋವಾದಿಗಳು ಸಾವಿರಾರು ಜನರ ಪ್ರಾಣ ಹಿಂಡಿದ್ದು, ಶಾಲೆ ಮತ್ತು ಆಸ್ಪತ್ರೆಗಳ ನಿರ್ಮಾಣಕ್ಕೂ ಅಡ್ಡಿಪಡಿಸಿದ್ದರು ಎಂದು ಹೇಳಿದರು. ಅವರ ಭಯೋತ್ಪಾದನೆಯಿಂದ ಅನೇಕ ಯುವಜನರು ಅನ್ಯಾಯಕ್ಕೆ ಒಳಗಾದರು ಎಂದು ಪ್ರಧಾನಿ ನೆನಪಿಸಿದರು.
“ನಮ್ಮ ಸರ್ಕಾರ ದಾರಿ ತಪ್ಪಿದ ಯುವಕರನ್ನು ಸಮಾಜದ ಮುಖ್ಯವಾಹಿನಿಗೆ ತರಲು ನಿರಂತರ ಪ್ರಯತ್ನ ನಡೆಸಿದೆ. ಈಗ ಆ ಪ್ರಯತ್ನದ ಫಲವಾಗಿ 303 ನಕ್ಸಲರು ಶರಣಾಗಿದ್ದಾರೆ. ಛತ್ತೀಸ್‌ಗಢದಲ್ಲಿ ಒಂದೇ ದಿನದಲ್ಲಿ 170 ನಕ್ಸಲರು ಶರಣಾದರು. ಇವರಲ್ಲಿ ಅನೇಕರ ತಲೆಗೆ ಬಹುಮಾನ ಘೋಷಿಸಲಾಗಿತ್ತು. ಅವರಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಂಡಿದ್ದೇವೆ,” ಎಂದು ವಿವರಿಸಿದರು.
ಸಾಮೂಹಿಕ ಶರಣಾಗತಿಗಳಿಂದ ನಕ್ಸಲ್ ಪ್ರಭಾವಿತ ಜಿಲ್ಲೆಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಹಿಂದೆ 125 ಜಿಲ್ಲೆಗಳು ನಕ್ಸಲ್ ಪ್ರಭಾವಕ್ಕೊಳಗಾಗಿದ್ದರೆ, ಇಂದು ಅದು ಕೇವಲ 11ಕ್ಕೆ ಇಳಿದಿದೆ. ಇದು ಸರ್ಕಾರದ ದೃಢಸಂಕಲ್ಪದ ಫಲ ಎಂದು ಪ್ರಧಾನಿ ಹೇಳಿದರು.