ಬೆಂಗಳೂರು: ಬೆಂಗಳೂರು: ಮತ ಕಳ್ಳತನ ಬಗ್ಗೆ ಆಘಾತಕಾರಿ ವರದಿಗಳು ಬಹಿರಂಗಗೊಳ್ಳಲಿವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಬುಧವಾರ ರಾತ್ರಿ ಪೂರ್ವಸಿದ್ಧತಾ ಸಭೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮತದಾರರ ಪಟ್ಟಿಯಲ್ಲಿ ಭಾರಿ ಮಟ್ಟದ ಅಕ್ರಮ ನಡೆದಿದ್ದು, ಇದರ ವಿರುದ್ಧ ಎಐಸಿಸಿ ನೇತೃತ್ವದಲ್ಲಿ ಭಾರೀ ಹೋರಾಟ ನಡೆಯಲಿದೆ ಎಂದು ತಿಳಿಸಿದರು.
ಎಐಸಿಸಿ ಅಧ್ಯಕ್ಷರೂ ಆಗಿರುವ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಆಗಸ್ಟ್ 5 ರಂದು ಬೆಂಗಳೂರಿನಲ್ಲಿ ಮತ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಚಳವಳಿ ಆಯೋಜಿಸಲಾಗಿದೆ. ಈ ಸಂಬಂಧದ ಪೂರ್ವ ಸಿದ್ದತಾ ಸಭೆಯಲ್ಲಿ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲಾ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಸೇರಿದಂತೆ ಎಐಸಿಸಿ ಕಾರ್ಯದರ್ಶಿಗಳು, ಸಚಿವರು, ಶಾಸಕರು, ಮುಖಂಡರು, ಪದಾಧಿಕಾರಿಗಳು ಭಾಗವಹಿಸಿದ್ದರು.
ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ವೇಣುಗೋಪಾಲ್, “ಕರ್ನಾಟಕ ಚುನಾವಣಾ ಆಯೋಗದ ವಿರುದ್ಧ ಜನಚಳವಳಿ ನಡೆಯಲಿದೆ. ಮತದಾರರ ಪಟ್ಟಿಗಳಲ್ಲಿ ನಡೆದಿರುವ ಅಕ್ರಮಗಳನ್ನು ಜನರ ಮುಂದೆ ತಂದು, ಚುನಾವಣಾ ಪ್ರಕ್ರಿಯೆಯ ಪವಿತ್ರತೆಯನ್ನು ಉಳಿಸಬೇಕಾಗಿದೆ,” ಎಂದು ಹೇಳಿದರು.