ಬೆಂಗಳೂರು: ಮತದಾರರ ಗುರುತುಪತ್ರಕ್ಕೆ ಆಧಾರ್ ಜೋಡಿಸುವ ಕೇಂದ್ರ ಚುನಾವಣಾ ಆಯೋಗದ ಕ್ರಮವು ಅತ್ಯಂತ ಮಹತ್ವದ ನಿರ್ಧಾರ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರು ಹಾಗೂ ರಾಜ್ಯ ವಕ್ತಾರರಾದ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಇದರಿಂದ ನಕಲಿ ಮತದಾನ ಮಾಡುವುದನ್ನು ತಪ್ಪಿಸಲು ಸಾಧ್ಯವಿದೆ. ಮೃತರ ಹೆಸರಿನಲ್ಲಿ ಮತದಾನವನ್ನೂ ತಪ್ಪಿಸಬಹುದು. ಕೇಂದ್ರದ ಚುನಾವಣಾ ಆಯೋಗವು ತೆಗೆದುಕೊಂಡ ಈ ನಿರ್ಣಯಕ್ಕಾಗಿ ತುಂಬು ಹೃದಯದ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
ಇದರಿಂದ ಮತದಾರರಿಗೂ ಅನುಕೂಲವಾಗಲಿದೆ. ಎಷ್ಟು ಮತದಾನವಾಗಿದೆ ಎಂಬುದರ ಕುರಿತು ತಿಳಿಯಲು ಅವಕಾಶವಾಗಲಿದೆ. ಇತರ ರಾಜ್ಯಗಳಿಗೆ ವಲಸೆ ಹೋದವರು ಬೇಗನೆ ಮತದಾರರ ಗುರುತುಚೀಟಿ ಪಡೆಯಲು ಅವಕಾಶವಾಗಲಿದೆ. ಇದೇವೇಳೆ, ಅಕ್ರಮ ನುಸುಳುಕೋರರು ಮತ ಹಾಕಿ ದೇಶದ ಭದ್ರತೆಗೆ ಅಪಾಯ ತಂದೊಡ್ಡುವುದನ್ನು ತಪ್ಪಿಸಲು ಸಾಧ್ಯವಿದೆ. ಇವೆಲ್ಲವುಗಳ ಹಿನ್ನೆಲೆಯಲ್ಲಿ ಇದೊಂದು ಅತ್ಯಂತ ಮಹತ್ವಪೂರ್ಣ ನಿರ್ಧಾರ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.