ಬೆಂಗಳೂರು: “ಮತಗಳ್ಳತನ ವಿರೋಧಿ ಹೋರಾಟವನ್ನು ಜನತೆಗೆ ತಲುಪಿಸಲು ನೆರವಾದ ಮಾಧ್ಯಮಗಳಿಗೆ ಧನ್ಯವಾದಗಳು. ಇಂತಹ ಸಮಾಜಮುಖಿ ವಿಷಯಗಳಲ್ಲಿ ಪಕ್ಷಾತೀತವಾಗಿ ನಿಂತರೆ ಜನಚಳುವಳಿಗಳಿಗೆ ಬುನಾದಿ ಇಡಬಹುದು,” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಹೇಳಿದರು.
ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ‘ಕ್ವಿಟ್ ಇಂಡಿಯಾ’ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “1942ರ ಆಗಸ್ಟ್ 8ರಂದು ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಆರಂಭವಾದ ‘ಭಾರತ ಬಿಟ್ಟು’ ಚಳುವಳಿ ಎರಡು ವರ್ಷಗಳ ಕಾಲ ನಿರಂತರವಾಗಿ ನಡೆದಿತ್ತು. ಕರ್ನಾಟಕದಿಂದ 162 ಮಂದಿ ಹುತಾತ್ಮರಾದರು, 7-8 ಸಾವಿರ ಮಂದಿಯನ್ನು ಬಂಧಿಸಲಾಯಿತು. ಆ ಹೋರಾಟವೇ ಸ್ವಾತಂತ್ರ್ಯದ ದೊಡ್ಡ ಅಡಿಪಾಯವಾಯಿತು,” ಎಂದು ನೆನಪಿಸಿದರು.
ಇಂದಿನ ಚಳುವಳಿಗಳ ಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿದ ಅವರು, “ಆಡಳಿತಗಾರರಿಗೆ ಚಳುವಳಿಗಳ ಮಹತ್ವವೇ ಗೊತ್ತಿಲ್ಲ. ಹೋರಾಟಗಾರರೂ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಜವಾಬ್ದಾರಿ ಅರಿಯುವುದಿಲ್ಲ. ರಾಹುಲ್ ಗಾಂಧಿ ಮೇಲೆ 51 ಪ್ರಕರಣ ದಾಖಲಿಸಿರುವ ಬಿಜೆಪಿ, ವಿರೋಧ ಪಕ್ಷದ ನಾಯಕರ ಮಾತನಾಡುವ ಹಕ್ಕನ್ನೇ ಕಸಿಯುತ್ತಿದೆ,” ಎಂದು ಟೀಕಿಸಿದರು.
ಮತದಾನದಲ್ಲಿ ಅಕ್ರಮಗಳ ಬಗ್ಗೆ ಅವರು ಗಂಭೀರ ಆರೋಪ ಮಾಡಿ, “ಚುನಾವಣಾ ಆಯೋಗವನ್ನು ಬಿಜೆಪಿ ದುರುಪಯೋಗ ಮಾಡಿಕೊಂಡಿದೆ. 25 ಕ್ಷೇತ್ರಗಳಲ್ಲಿ ಚುನಾವಣೆ ಪಾರದರ್ಶಕವಾಗಿದ್ದರೆ ನರೇಂದ್ರ ಮೋದಿ ಪ್ರಧಾನಿಯಾಗಿರುತ್ತಿರಲಿಲ್ಲ. ಕೇಂದ್ರ ಸರ್ಕಾರ ಇಡಿ, ಸಿಬಿಐ, ಐಟಿ ಇಲಾಖೆಗಳನ್ನೂ ರಾಜಕೀಯವಾಗಿ ಬಳಸುತ್ತಿದೆ. ವಿರೋಧ ಪಕ್ಷದವರ ಮೇಲೆ ದಾಳಿ ಮಾಡಿ, ಬಳಿಕ ಅವರನ್ನು ಬಿಜೆಪಿ ಸೇರಿಸಿಕೊಂಡರೆ ಪ್ರಕರಣಗಳು ಹಿಂಪಡೆಯುತ್ತವೆ,” ಎಂದರು.
ಮತಗಳ್ಳತನ ತಡೆಯಲು ಈಗಾಗಲೇ 5 ಸಮಿತಿಗಳನ್ನು ರಚಿಸಿರುವುದಾಗಿ ತಿಳಿಸಿ, “ನಾಗರಾಜ ಯಾದವ್ ನೇತೃತ್ವದ ಈ ಸಮಿತಿಗಳು ಎಲ್ಲ ಕ್ಷೇತ್ರಗಳಲ್ಲೂ ಅಕ್ರಮಗಳ ಮೇಲೆ ಕಣ್ಣು ಇರಿಸಲಿವೆ. ರಾಜಕೀಯದಲ್ಲಿ 49% ಮತ್ತು 51% ನಡುವಿನ ಅಂತರವೇ ಗೆಲುವು-ಸೋಲು ತೀರ್ಮಾನಿಸುತ್ತದೆ. ಈ ‘ಅಂಕಿಗಳ ಆಟ’ದಲ್ಲಿ ಬಿಜೆಪಿ ಪರಿಣತರು,” ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯ ವಿದೇಶಾಂಗ ನೀತಿಯನ್ನು ಟೀಕಿಸಿದ ಅವರು, “ಅಮೆರಿಕಾ ಅಧ್ಯಕ್ಷರನ್ನು ತೆಲು ಮೇಲೆ ಹೊತ್ತು ತಿರುಗಿಸಿದ ಕೇಂದ್ರ ಬಿಜೆಪಿ, ಇಂದು ಚೀನಾದೊಂದಿಗೆ ಮಾತುಕತೆಗೆ ಹೋಗಬೇಕಾದ ಪರಿಸ್ಥಿತಿಗೆ ಬಂದಿದೆ. ಪ್ರಧಾನಮಂತ್ರಿಗಳು ದೇಶದ ಹಿತಕ್ಕಾಗಿ ಕೆಲಸ ಮಾಡಬೇಕೇ ಹೊರತು, ವೈಯಕ್ತಿಕ ಹಿತಕ್ಕಾಗಿ ಅಲ್ಲ,” ಎಂದರು.
ಕಾರ್ಯಕ್ರಮದಲ್ಲಿ ಸಚಿವ ಕೆ.ಎಚ್. ಮುನಿಯಪ್ಪ, ಪರಿಷತ್ ಸರ್ಕಾರದ ಮುಖ್ಯಸಚೇತಕ ಸಲೀಂ ಅಹ್ಮದ್, ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವೆ ರಾಣಿ ಸತೀಶ್, ಬಿ.ಟಿ. ಲಲಿತಾ ನಾಯಕ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಹಾಗೂ ಇತರರು ಉಪಸ್ಥಿತರಿದ್ದರು.