ನವದೆಹಲಿ: ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆಕರೆದು ಸಮಸ್ಯೆ ಬಗರಹರಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.
ಈ ತಿಂಗಳು ಸಂಸತ್ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸೋಮವಾರ ನಡೆಸಿದ ಸುದ್ದಿಗೋಷ್ಠಿ ಗಮನಸೆಳೆಯಿತು. ಅಧಿವೇಶನಕ್ಕೆ ಮುನ್ನ ಗಲಭೆ ಸಂತ್ರಸ್ತ ರಾಜ್ಯಕ್ಕೆ ಪ್ರಧಾನಿ ಭೇಟಿ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಮಣಿಪುರ ಕಾಂಗ್ರೆಸ್ ಮುಖ್ಯಸ್ಥ ಕೆ ಮೇಘಚಂದ್ರ ಸಿಂಗ್ ಹಾಗೂ ಎಐಸಿಸಿ ರಾಜ್ಯ ಉಸ್ತುವಾರಿ ಗಿರೀಶ್ ಚೋಡಂಕರ್ ಉಪಸ್ಥಿತಿಯಲ್ಲಿ ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜೈರಾಮ್ ರಮೇಶ್, ಪ್ರಧಾನಿ ಮೋದಿಯವರು ಮೊದಲು ಮಣಿಪುರದ ಸರ್ವಪಕ್ಷಗಳ ನಿಯೋಗವನ್ನು ಭೇಟಿ ಮಾಡಬೇಕು, ನವೆಂಬರ್ 25 ರಿಂದ ಪ್ರಾರಂಭವಾಗುವ ಸಂಸತ್ ಅಧಿವೇಶನಕ್ಕೂ ಮುನ್ನ ದೇಶದ ಸರ್ವಪಕ್ಷಗಳ ನಾಯಕರ ಸಭೆಯನ್ನು ಕರೆಯಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ, ಮಣಿಪುರ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಗಿರಿವ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮಣಿಪುರ ಸಿಎಂ ಬಿರೇನ್ ಸಿಂಗ್ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.