ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಮತ ಖರೀದಿಸಲು ಎನ್‌ಡಿಎ ಸರ್ಕಾರವೇ ಹಣ ಹಂಚುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.
ಪಾಟ್ನಾದ ಸದಾಕತ್ ಆಶ್ರಮದಲ್ಲಿ ನಡೆದ “ಶಕ್ತಿ ಅಧಿಕಾರ ಮಹಿಳಾ ಸಂವಾದ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮಹಿಳೆಯರ ಶಕ್ತಿಯನ್ನು ರಾಜಕೀಯ ಪಕ್ಷಗಳು ಚೆನ್ನಾಗಿ ಅರಿತಿವೆ. ಅದಕ್ಕಾಗಿ ಚುನಾವಣೆಗೂ ಮೊದಲು 10,000 ರೂ. ನೀಡಲಾಗುತ್ತಿದೆ. ನಿಮ್ಮ ಬೆಂಬಲವಿಲ್ಲದೆ ಅವರಿಗೆ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂಬುದನ್ನು ಅವರು ತಿಳಿದಿದ್ದಾರೆ” ಎಂದು ವ್ಯಂಗ್ಯವಾಡಿದರು.
ಮಹಿಳೆಯರ ಜೀವನಮಟ್ಟ ಸುಧಾರಿಸಲು ಮಹಾಮೈತ್ರಿಕೂಟದ ಐದು ಅಂಶಗಳ ಭರವಸೆಯನ್ನು ಪ್ರಿಯಾಂಕಾ ಪ್ರಕಟಿಸಿದರು. ಇದರಲ್ಲಿ ಪ್ರತೀ ಮಹಿಳೆಗೆ ಮಾಸಿಕ 2,500 ರೂ. ಭತ್ಯೆ, ಆರೋಗ್ಯ ವಿಮೆ 25 ಲಕ್ಷ ರೂ.ವರೆಗೆ, ಭೂಹೀನ ಕುಟುಂಬಗಳಿಗೆ ಉಚಿತ ಜಮೀನು ಹಂಚಿಕೆ, ಮಹಿಳೆಯರ ಹೆಸರಿನಲ್ಲಿ ನೋಂದಣಿ, ಉದ್ಯೋಗ ಸೃಷ್ಟಿ ಮೊದಲಾದವು ಸೇರಿವೆ.
ನಿತೀಶ್ ಕುಮಾರ್ ನೇತೃತ್ವದ ಸರ್ಕಾರವನ್ನು ಟೀಕಿಸಿದ ಅವರು, “ಪುರುಷರು ಉದ್ಯೋಗಕ್ಕಾಗಿ ವಲಸೆ ಹೋಗುತ್ತಿರುವಾಗ ಮಹಿಳೆಯರು ಮನೆಯ ಹೊರೆಯನ್ನು ಹೊರುತ್ತಿದ್ದಾರೆ. ಆದರೆ ಸರ್ಕಾರ ಯಾವುದೇ ಸಬಲೀಕರಣ ಕ್ರಮ ತೆಗೆದುಕೊಳ್ಳುವುದಿಲ್ಲ” ಎಂದು ಕಟುವಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳಾ ವೃತ್ತಿಪರರು, ಅಂಗನವಾಡಿ, ಆಶಾ ಕಾರ್ಯಕರ್ತರು ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು. ಬಳಿಕ ಪ್ರಿಯಾಂಕಾ ಸೆಲ್ಫಿ, ಹ್ಯಾಂಡ್‌ಶೇಕ್‌ಗಳಿಂದ ಮನಸೆಳೆಯುತ್ತಾ, “ಹಮ್ ಹೊಂಗೇ ಕಾಮ್ಯಾಬ್” ಹಾಡಿ, “ಮತ ಕಳ್ಳರೇ, ಸಿಂಹಾಸನ ತೊರೆಯಿರಿ” ಘೋಷಣೆಗೆ ವೇದಿಕೆಯನ್ನು ತೇಲಿಸಿದರು.
ಪಾಟ್ನಾದ ಸಭೆಯ ನಂತರ, ಅವರು ಹೆಲಿಕಾಪ್ಟರ್‌ನಲ್ಲಿ ಮೋತಿಹಾರಿಗೆ ತೆರಳಿ “ಹರ್ ಘರ್ ಅಧಿಕಾರ್ ರ್ಯಾಲಿ” ಯಲ್ಲಿ ಮಾತನಾಡಿದರು. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ರಾಮ್, ಉಸ್ತುವಾರಿ ಕೃಷ್ಣ ಅಲ್ಲವರು ಸೇರಿದಂತೆ ಹಲವು ಸಂಸದರು ಅವರೊಂದಿಗೆ ಹಾಜರಿದ್ದರು.