ಬೆಂಗಳೂರು: ಬಿಬಿಎಂಪಿ ಚುನಾವಣೆ ಸಂಬಂಧ ಸರ್ಕಾರ ಹೊರಡಿಸಿರುವ ವಾರ್ಡ್ ಮೀಸಲಾತಿ ವಿರುದ್ಧ ಸರಣಿ ಹೋರಾಟ ನಡೆಸಲು ಪ್ರದೇಶ ಕಾಂಗ್ರೆಸ್ ನಿರ್ಧರಿಸಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ, ಕಾಂಗ್ರೆಸ್ ಶಾಸಕರು ಇಲ್ಲದ ಕಡೆಗಳಲ್ಲಿ ಭೇಟಿ ನೀಡುತ್ತಿದ್ದೇನೆ. ಆ ಮೂಲಕ ನಮ್ಮ ಕಾರ್ಯಕರ್ತರಿಗೆ ಶಕ್ತಿ ತುಂಬುವ ಪ್ರಯತ್ನ ಮಾಡುತ್ತಿದ್ದೇವೆ. ಸರ್ಕಾರ ಚುನಾವಣೆ ಮುಂದೂಡಲು ಪ್ರಯತ್ನಿಸುತ್ತಿದ್ದು, ಜನರಿಗೆ ಅಧಿಕಾರ ಸಿಗಬೇಕು ಎಂಬುದು ನಮ್ಮ ಉದ್ದೇಶ. ಪಾಲಿಕೆಯಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ ಎಂದರು.
ಬಿಜೆಪಿ ಸರ್ಕಾರ ಚುನಾವಣೆ ಮೀಸಲಾತಿ ಪಟ್ಟಿಯನ್ನು ತನಗೆ ಬೇಕಾದ ರೀತಿಯಲ್ಲಿ ಮಾಡಿಕೊಂಡಿದೆ. ವಾರ್ಡ್ ಮರುವಿಂಗಡಣೆ ವಿಚಾರವಾಗಿ 3 ಸಾವಿರಕ್ಕೂ ಹೆಚ್ಚು ಆಕ್ಷೇಪಗಳು ವ್ಯಕ್ತವಾಗಿದ್ದು, ಸರ್ಕಾರ ಯಾವುದೇ ಆಕ್ಷೇಪಕ್ಕೂ ಸ್ಪಂದಿಸುವ ಕೆಲಸ ಮಾಡಿಲ್ಲ. ಅವರು ಏನೇ ಮಾಡಲಿ, ನಾವು ಜನರ ಮೇಲೆ ವಿಶ್ವಾಸವಿಟ್ಟು ಜನರ ಮಧ್ಯೆ ಹೋಗುತ್ತೇವೆ. ಬೆಲೆ ಏರಿಕೆ ಮೂಲಕ ದಿನನಿತ್ಯ ಜನರಿಗೆ ನೋವು ನೀಡುತ್ತಿರುವ ಸರ್ಕಾರ ಕಿತ್ತೊಗೆಯಲು ಹೋರಾಟ ಮಾಡುತ್ತೇವೆ ಎಂದು ಡಿಕೆಶಿ ತಿಳಿಸಿದರು.
ಬಿಬಿಎಂಪಿ ಚುನಾವಣೆ ಮೀಸಲಾತಿ ವಿಚಾರವಾಗಿ ಹೋರಾಟ ಮಾಡುತ್ತೀರಾ ಎಂದು ಕೇಳಿದಾಗ, ‘ನಮ್ಮ ನಾಯಕರೆಲ್ಲರೂ ಸೇರಿ ನಗರಾಭಿವೃದ್ಧಿ ಕಚೇರಿಗೆ ಬಿಜೆಪಿ ಕಚೇರಿ ಎಂದು ನಾಮಫಲಕ ಹಾಕಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಕೆಲವರು ನ್ಯಾಯಾಲಯದ ಮೋರೆ ಹೋಗಲಿದ್ದಾರೆ. ಈ ಮೀಸಲಾತಿ ಪಟ್ಟಿ ಹೇಗೇ ಇದ್ದರೂ ಚುನಾವಣೆಗೆ ಸಿದ್ಧವಾಗಿ ಎಂದು ನಮ್ಮ ನಾಯಕರಿಗೆ ಹೇಳಿದ್ದೇನೆ. ನಮ್ಮ ಹಲವು ಪ್ರಮುಖ ನಾಯಕರೆಲ್ಲರೂ ಸ್ಥಳೀಯ ಸಂಸ್ಥೆಗಳ ಸದಸ್ಯರಾಗಿದ್ದರು. ಇದು ಸಣ್ಣ ಚುನಾವಣೆ ಅಲ್ಲ, ದೊಡ್ಡ ಚುನಾವಣೆ ನೀವು ಕೂಡ ನಾಯಕರಾಗಿ ಎಂದು ನಮ್ಮ ಪಕ್ಷದವರಿಗೆ ತಿಳಿಸಿದ್ದೇವೆ’ ಎಂದು ತಿಳಿಸಿದರು.