ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಿಂದ 20 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಅರ್ಹ ವಾಣಿಜ್ಯೇತರ ವಾಹನ ಮಾಲೀಕರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಸರ್ಕಾರ ರಿಯಾಯಿತಿ ದರದ ವಾರ್ಷಿಕ ಸ್ಥಳೀಯ ಟೋಲ್ ಪಾಸ್ ಪರಿಚಯಿಸಿದೆ. ಈ ಯೋಜನೆಯು 2026ರ ನವೆಂಬರ್ 1ರಿಂದ ಜಾರಿಗೆ ಬರಲಿದೆ.
ಯೋಜನೆಯಡಿ, ಪುರಸಭೆ ಅಥವಾ ಸ್ಥಳೀಯ ಪಟ್ಟಣದ ವ್ಯಾಪ್ತಿಯ ಹೊರಗಿರುವ ಟೋಲ್ ಪ್ಲಾಜಾಗಳಿಗೆ ವಾರ್ಷಿಕ ಪಾಸ್ ಪಡೆಯಲು ₹1,500 ಪಾವತಿಸಬೇಕು. ಸ್ಥಳೀಯ ಪುರಸಭೆ ಅಥವಾ ಪಟ್ಟಣದ ವ್ಯಾಪ್ತಿಯೊಳಗಿರುವ ಟೋಲ್ ಪ್ಲಾಜಾಗಳಿಗೆ ಈ ಶುಲ್ಕ ₹3,000 ಆಗಿರಲಿದೆ. ಈ ಸೌಲಭ್ಯವು ನಿಗದಿತ ಟೋಲ್ ಪ್ಲಾಜಾಗಳಿಗೆ ಮಾತ್ರ ಅನ್ವಯವಾಗಲಿದ್ದು, ಪಾಸ್ ಅನ್ನು ಮತ್ತೊಂದು ವಾಹನಕ್ಕೆ ವರ್ಗಾಯಿಸಲು ಅವಕಾಶವಿರುವುದಿಲ್ಲ.
ಪಾಸ್ ಪಡೆಯಲು ವಾಹನ ಮಾಲೀಕರು ಸಕ್ರಿಯ ಫಾಸ್ಟ್ಟ್ಯಾಗ್ ಹೊಂದಿರಬೇಕು. ಅರ್ಹರು ಹೊಸ ವಾರ್ಷಿಕ ಸ್ಥಳೀಯ ಪಾಸ್ ಅಥವಾ ಈಗಿರುವ ಮಾಸಿಕ ಪಾಸ್ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

ಆದರೆ, ಮುಚ್ಚಿದ ಟೋಲ್ ಸಂಗ್ರಹ ವ್ಯವಸ್ಥೆ ಹೊಂದಿರುವ ಹೆದ್ದಾರಿಗಳು ಹಾಗೂ ಸೇವಾ ರಸ್ತೆ ಅಥವಾ ಪರ್ಯಾಯ ಮಾರ್ಗ ಲಭ್ಯವಿರುವ ಕೆಲವು ಸ್ಥಳಗಳು ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ಪಾಸ್ ಪಡೆಯುವ ಮೊದಲು ತಮ್ಮ ಟೋಲ್ ಪ್ಲಾಜಾ ಯೋಜನೆಗೆ ಅರ್ಹವಾಗಿದೆಯೇ ಎಂಬುದನ್ನು ಪರಿಶೀಲಿಸುವುದು ಅಗತ್ಯವಾಗಿದೆ.
ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು, 2026ರ ಅಡಿಯಲ್ಲಿ ಈ ಸಂಬಂಧ ತಿದ್ದುಪಡಿ ಸೂಚಿಸಲಾಗಿದೆ. ನವೆಂಬರ್ 1ರಿಂದ ಅರ್ಹ ಟೋಲ್ ಪ್ಲಾಜಾಗಳಲ್ಲಿ ಪಾಸ್ ಸೌಲಭ್ಯ ಲಭ್ಯವಾಗಲಿದ್ದು, ಡಿಸೆಂಬರ್ 1ರಿಂದ ‘ರಾಜಮಾರ್ಗಯಾತ್ರೆ’ ಮೊಬೈಲ್ ಅಪ್ಲಿಕೇಶನ್ ಮೂಲಕವೂ ಪಡೆಯಬಹುದು.
ಟೋಲ್ ಪ್ಲಾಜಾಗಳ ಸಮೀಪ ವಾಸಿಸುವ ಜನರ ಸ್ಥಳೀಯ ಪ್ರಯಾಣದ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಸಂಚಾರವನ್ನು ಹೆಚ್ಚು ಅನುಕೂಲಕರಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಸರ್ಕಾರ ತಿಳಿಸಿದೆ.















































































