ಮಂಗಳೂರು: ಕರಾವಳಿ ಭಾಗದಲ್ಲಿ ಭಾರೀ ಸಂಚಲನ ಮೂಡಿಸಿರುವ ಹಿಂದೂ ಕಾರ್ಯಕರ್ತ ಅರುಣ್ ಪುತ್ತಿಲ ಅವರು ಬಿಜೆಪಿ ಜೊತೆ ಕೈ ಜೋಡಿಸಲು ಸಿದ್ದರಾಗಿದ್ದಾರೆ. ಈ ಕುರಿತಂತೆ ಪುತ್ತೂರಿನಲ್ಲಿ ಸೋಮವಾರ ನಡೆದ ಪುತ್ತಿಲ ಪರಿವಾರ ಸಮಾಲೋಚನಾ ಸಭೆಯಲ್ಲಿ, ಬಿಜೆಪಿ ಜತೆ ವಿಲೀನಕ್ಕೆ ಒಲವು ವ್ಯಕ್ತವಾಗಿದೆ. ಆದರೆ ಕಠಿಣ ಷರತ್ತುಗಳನ್ನು ಪುತ್ತಿಲ ಪರಿವಾರ ಮುಂದಿಟ್ಟಿದೆ. ಲೋಕಸಭಾ ಚುನಾವಣೆಗೂ ಮುನ್ನ ಪುತ್ತೂರು ಗ್ರಾಮಾಂತರ ಮತ್ತು ನಗರ ಮಂಡಲ ಒಟ್ಟು ಸೇರಿಸಿ ಅಧ್ಯಕ್ಷ ಹಾಗೂ ಪದಾಧಿಕಾರಿ ಸ್ಥಾನ ತಮ್ಮ ಬೆಂಬಲಿಗರಿಗೆ ನೀಡಿದರೆ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ಅರುಣ್ ಪುತ್ತಿಲ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 718 ವಾಟ್ಸಾಪ್ ಗ್ರೂಪ್ ಗಳಲ್ಲಿ 4,23,400 ಬೆಂಬಲಿಗರಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬೇಕಾದರೆ ದೊಡ್ಡ ಸಂಗತಿಯೇ ಇಲ್ಲ, ವ್ಯವಸ್ಥೆಗಳ ಅಗತ್ಯವೂ ಇಲ್ಲ ಎಂದಿರುವ ಅರುಣ್ ಪುತ್ತಿಲ, ಮಾತೃ ಪಕ್ಷದವರು ಈ ಬಗ್ಗೆ ಮೂರು ದಿನಗಳೊಳಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಚುನಾವಣಾ ರಾಜಕೀಯಕ್ಕೆ ಪುತ್ತಿಲ ಪರಿವಾರ ಸಿದ್ಧವಾಗಿದೆ ಎಂಬ ಸಂದೇಶವನ್ನು ಬಿಜೆಪಿ ನಾಯಕರಿಗೆ ರವಾನಿಸಿದ್ದಾರೆ.




























































