ಬೆಂಗಳೂರು: ದ್ವೇಷದ ರಾಜಕಾರಣವನ್ನು ಕೊನೆಗಾಣಿಸುವುದೇ ನಾವು ರಾಜೀವ್ ಗಾಂಧಿಯವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಿಜೆಪಿ ಇರುವವರೆಗೂ ಸಮಾಜದಲ್ಲಿ ಶಾಂತಿ, ನೆಮ್ಮದಿ ಸಾಮರಸ್ಯ ಇರುವುದಿಲ್ಲ. ಬಡವರು, ದಲಿತರು, ಹಿಂದುಳಿದವರು ದೇಶದ ಅನೇಕ ಭಾಗಗಳಲ್ಲಿ ಆತಂಕದಲ್ಲಿ ಬದುಕುತ್ತಿದ್ದಾರೆ. ಜಗತ್ತು ಮತ್ತು ದೇಶದಲ್ಲಿ ಶಾಂತಿ ನೆಲೆಸಿದ್ದರೆ ಮಾತ್ರ ಮನುಕುಲ ಉದ್ಧಾರವಾಗುತ್ತದೆ. ರಾಜ್ಯದಲ್ಲಿ ಸರ್ವ ಜನಾಂಗದ ಶಾಂತಿಯ ತೋಟವನ್ನು ನಿರ್ಮಿಸಬೇಕಿದೆ. ಇದನ್ನು ಸ್ಥಾಪಿಸಲು ಮಾಜಿ ಪ್ರಧಾಣಿಗಳಾದ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಮತ್ತಿತರರು ಪ್ರಯತ್ನಿಸಿದರು. ರಾಜೀವ್ ಗಾಂಧಿಯಂತಹ ಮಹಾನ್ ನಾಯಕನೊಬ್ಬನನ್ನು ಭಯೋತ್ಪಾದನೆ ಬಲಿತೆಗೆದುಕೊಂಡಿದೆ. ರಾಜೀವ್ ಗಾಂಧಿಯವರು ಒಬ್ಬ ಕ್ರಿಯಾಶೀಲ ನಾಯಕರು ಎಂದು ಮುಖ್ಯಮಂತ್ರಿಗಳು ಬಣ್ಣಿಸಿದರು. ಅವರು ಹಾಕಿಕೊಟ್ಟ ದಾರಿಯಲ್ಲಿ ಎಲ್ಲರೂ ನಡೆಯುವ ಪ್ರಯತ್ನ ಮಾಡೋಣ ಎಂದರು.
ಕಾಂಗ್ರೆಸ್ ನವರು ಭಯೋತ್ಪಾದನೆಯನ್ನು ಬೆಂಬಲಿಸುತ್ತಾರೆ ಎಂದು ಮಾತನಾಡುವ ಬಿಜೆಪಿಯವರು ಯಾರೂ ಭಯೋತ್ಪಾದನೆಯಲ್ಲಿ ಪ್ರಾಣ ಕಳೆದುಕೊಂಡಿಲ್ಲ. ಕಾಂಗ್ರೆಸ್ಸಿನವರು ದೇಶದಲ್ಲಿ ಭಯೋತ್ಪಾದನೆ ತೊಲಗಿಸಲು ಹೋರಾಡಿದರು. ಭಯೋತ್ಪಾದನೆಯಿಂದ ದೇಶಕ್ಕೆ ಅಪಾಯ. ಜನರ ನೆಮ್ಮದಿ, ಶಾಂತಿಯನ್ನು ಹಾಳು ಮಾಡುವ ಭಯೋತ್ದಾದನೆಯನ್ನು ತೊಡೆದುಹಾಕಲು ಕಾಂಗ್ರೆಸ್ ಮೊದಲಿನಿಂದಲೂ ಹೋರಾಟ ಮಾಡುತ್ತಿದೆ. ಭಯೋತ್ದಾದನೆಗೆ ರಾಜೀವ್ ಗಾಂಧಿ ಹಾಗೂ ಇಂದಿರಾ ಗಾಂಧಿ ಬಲಿಯಾಗಿದ್ದಾರೆ. ದೇಶದ ಐಕ್ಯತೆ, ಸಾರ್ವಭೌಮತ್ವವನ್ನು ಎತ್ತಿಹಿಡಿಯುವಲ್ಲಿ ಕಾಂಗ್ರೆಸ್ ಮುಂಚೂಣಿಯಲ್ಲಿದೆ. ದೇಶಕ್ಕೆ ಸ್ವಾತಂತ್ರ್ಯ ತರಲು ಹೋರಾಡಿ, ಭಾರತೀಯರಿಗೆ ಅವರದ್ದೇ ಸರ್ಕಾರ ರೂಪಿಸಲು ಅವಕಾಶ ಮಾಡಿಕೊಟ್ಟಿದ್ದು ಕಾಂಗ್ರಸ್ ಪಕ್ಷ. ಸ್ವಾತಂತ್ರ್ಯದ ಬೆಲೆ ಕಾಂಗ್ರೆಸ್ ಗೆ ತಿಳಿದಿದೆ. ರಾಜೀವ್ ಗಾಂಧಿಯವರು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ತಮ್ಮದೇ ಕೊಡುಗೆ ನೀಡಿದ್ದಾರೆ. ನೆಹರೂ ಅವರು ಪ್ರಜಾಪ್ರಭುತ್ವದ ಬುನಾದಿ ಹಾಕಿದವರು. ಭಾರತದಂತಹ ದೊಡ್ಡ ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಲು ಜವಾಹರ್ ಲಾಲ್ ನೆಹರು ಅವರು ಹಾಕಿದ ಬುನಾದಿಯೇ ಕಾರಣ. ವಿರೋಧ ಪಕ್ಷಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ಬೆಂಬಲ ಸಹಕಾರ ನೀಡಿದರು. ಈಗಿನ ಪ್ರಧಾನಿಗಳಿಗೂ ನೆಹರೂ ಅವರಿಗೂ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ರಾಜೀವ್ ಗಾಂಧಿಯವರು ಪ್ರಜಾಪ್ರಭುತ್ವದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಬಯಸಿದ್ದರು. ರಾಹುಲ್ ಗಾಂಧಿಯವರು ಅದನ್ನು ಮುಂದುವರೆಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವ ಎಂ.ಬಿ.ಪಾಟೀಲ್ , ಬಿ.ಕೆ ಹರಿಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.