ನವದೆಹಲಿ: ಜಿಎಸ್‌ಟಿ ಸರಳೀಕರಣ ಹಾಗೂ ನಾಗರಿಕರ ಮೊದಲ ಆದ್ಯತೆಯ ಮೂಲಸೌಕರ್ಯದಂತಹ ಕ್ರಮಗಳು ಸರ್ಕಾರದ ಬದ್ಧತೆಯನ್ನು ತೋರಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಬರೆದ ಲೇಖನವನ್ನು ಹಂಚಿಕೊಂಡ ಅವರು, “ವಿವರಗಳಿಗೆ ಗಮನ ಹಾಗೂ ಶಿಸ್ತಿನ ಯೋಜನೆಗಳಿಂದ ಪ್ರಯೋಜನ ಪ್ರತಿಯೊಬ್ಬ ನಾಗರಿಕರಿಗೆ ತಲುಪುತ್ತಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಪುರಿ ಅವರು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದು, ‘ನರೇಂದ್ರ ಮೋದಿಯವರ ವೃತ್ತಿಪರತೆ ಹಾಗೂ ನಿಷ್ಕಳಂಕ ಕೆಲಸದ ಶೈಲಿಯೇ ಪ್ರಧಾನಿಯನ್ನು ವಿಭಿನ್ನಗೊಳಿಸುತ್ತದೆ. ಅವರ ಶಿಸ್ತು ದೃಷ್ಟಿಯನ್ನು ಬಾಳಿಕೆ ಬರುವ ವ್ಯವಸ್ಥೆಗಳಾಗಿ ಪರಿವರ್ತಿಸುತ್ತದೆ” ಎಂದಿದ್ದಾರೆ. ಸಭೆಯ ಮೊದಲು ಪ್ರತಿಯೊಂದು ಕಡತವನ್ನು ತಾಳ್ಮೆಯಿಂದ ಪರಿಶೀಲಿಸುವ ಶೈಲಿಯೇ ಅವರಿಂದ ನಿರೀಕ್ಷಿಸುವ ನಿಖರತೆಯನ್ನು ತೋರಿಸುತ್ತದೆ ಎಂದು ಗಮನಸೆಳೆದಿದ್ದಾರೆ.
“ಚರ್ಚೆಗಳು ನಾಗರಿಕವಾಗಿರುತ್ತವೆ ಆದರೆ ನಿರ್ದಾಕ್ಷಿಣ್ಯವಾಗಿಯೂ ಇರುತ್ತವೆ. ಬಲವಾದ ವಾದಗಳಿಗೆ ಸದಾ ಆದ್ಯತೆ ದೊರಕುತ್ತದೆ. ಜವಾಬ್ದಾರಿಯನ್ನು ಸ್ಪಷ್ಟವಾಗಿ ನಿಯೋಜಿಸುವುದು ಮತ್ತು ಯಶಸ್ಸಿನ ಮಾಪಕಗಳನ್ನು ನಿಖರವಾಗಿ ನಿರ್ಧರಿಸುವುದು ಅವರ ಕಾರ್ಯವೈಖರಿ” ಎಂದು ಪುರಿ ಹೇಳಿದ್ದಾರೆ.
ಸೆಪ್ಟೆಂಬರ್ 22ರಿಂದ ಜಾರಿಗೆ ಬಂದ ಜಿಎಸ್‌ಟಿ ಸುಧಾರಣೆಗಳಿಂದ ನಾಲ್ಕು ಹಂತದ ತೆರಿಗೆ ರಚನೆ ಬದಲಾಗಿದ್ದು, ಈಗ ಮುಖ್ಯವಾಗಿ 5% ಮತ್ತು 18% ದರ ಮಾತ್ರ ಉಳಿದಿವೆ. ಐಷಾರಾಮಿ ಮತ್ತು ‘ಪಾಪ’ ಸರಕುಗಳಿಗೆ 40% ವಿಶೇಷ ತೆರಿಗೆ ವಿಧಿಸಲಾಗಿದೆ. ಈ ಬದಲಾವಣೆಗಳಿಂದ ದಿನನಿತ್ಯದ ಸರಕುಗಳ ಬೆಲೆ ಕಡಿಮೆಯಾಗುವ ನಿರೀಕ್ಷೆಯಿದೆ. ಗೃಹೋಪಯೋಗಿ ಎಲೆಕ್ಟ್ರಾನಿಕ್ಸ್, ಸಣ್ಣ ಕಾರುಗಳು, ಆಟೋ ಬಿಡಿಭಾಗಗಳು 18% ಸ್ಲ್ಯಾಬ್‌ಗೆ ಸರಿಸಲಾಗಿದ್ದು, ಆಹಾರ ಮತ್ತು ಅಗತ್ಯ ಸರಕುಗಳು 5% ಕ್ಕೆ ಇಳಿಕೆಯಾಗಿದೆ.