ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಆಷಾಡ ಶುಕ್ರವಾರದ ಎಲ್ಲಾ ಕಾರ್ಯಕ್ರಮಗಳು ನರ್ವಿಘ್ನವಾಗಿ ನಡೆದಿರುವ ಬಗ್ಗೆ ಜಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಂತಸ ಹಂಚಿಕೊಂಡಿದ್ದಾರೆ. ಈ ಸಂಬಂಧ ಅವರು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಭಕ್ತರಿಗೆ ಲಾಡು ಪ್ರಸಾದ ವಿತರಣೆ ಸೇವೆ ನೆರವೇರಿಸಿದರು.
ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಭಾನುವಾರ ಆಷಾಢ ಮಾಸದ ಹಿನ್ನೆಲೆಯಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಚಿವರು ವೈಯಕ್ತಿಕವಾಗಿ 50 ಸಾವಿರ ಲಾಡು ಪ್ರಸಾದ್ ಮಾಡಿಸಿ, ಭಕ್ತಾಧಿಗಳಿಗೆ ಸ್ವತಃ ನಿಂತು ಪ್ರಸಾದ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ, ಮುಡಾ ಮಾಜಿ ಅಧ್ಯಕ್ಷರಾದ ಹೆಚ್.ವಿ.ರಾಜೀವ್, ಮುಖಂಡರಾದ ಶ್ರೀವತ್ಸ, ಮಂಗಳ ಸೋಮಶೇಖರ್, ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ. ಶಶಿಶೇಖರ್ ದೀಕ್ಷಿತ್, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜಿ.ಕೃಷ್ಣ ಉಪಸ್ಥಿತರಿದ್ದರು.




















































