ಬೆಂಗಳೂರು: ಕೇಂದ್ರದಿಂದ ನಮಗೆ ಹಂಚಿಕೆಯಾದ ರಸಗೊಬ್ಬರ ನೀಡಿದರೇ ಸಾಕು, ಸಮಸ್ಯೆ ಬಗೆಹರಿಯುತ್ತದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ. ವಿಧಾನ ಪರಿಷತ್ ಕಲಾಪದ ಶೂನ್ಯವೇಳೆಯಲ್ಲಿ ಇಂದು ಯೂರಿಯಾ ಗೊಬ್ಬರ ಕೊರತೆಗೆ ಸಂಬಂಧಿಸಿದಂತೆ ವಿಚಾರ ಪ್ರಸ್ತಾಪಿಸಿದ ಬಿಜೆಪಿ ಶಾಸಕ ಹಣಮಂತ ನಿರಾಣಿ ಪ್ರಶ್ನೆಗೆ ಕೃಷಿ ಸಚಿವ ಚಲುವರಾಯಸ್ವಾಮಿ ಉತ್ತರಿಸಿದರು.
ಕೇಂದ್ರದಿಂದ ನಮಗೆ ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರ ಪೂರೈಕೆ ಆಗಿಲ್ಲ, ಜೊತೆಗೆ ಕೇಂದ್ರ ಸರ್ಕಾರ ಕೂಡ ಯೂರಿಯಾ ಬಳಕೆ ಕಡಿಮೆ ಮಾಡಲು ನಿರ್ದೇಶನ ನೀಡಿತ್ತು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಆದೇಶವನ್ನು ನಾವು ಫಾಲೋ ಮಾಡ್ತಿದ್ದೇವೆ ಎಂದು ಸಚಿವರು ಉತ್ತರ ನೀಡಿದರು. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನಮಗೆ ಸಹಕಾರ ನೀಡುತ್ತಾ ಬಂದಿದ್ದಾರೆ, ಹಾಗೇ ನಮ್ಮ ರಾಜ್ಯದ ಸಂಸದರೂ ರಸಗೊಬ್ಬರ ಹಂಚಿಕೆ ವಿಚಾರದಲ್ಲಿ ಆಗಿರುವ ಸಮಸ್ಯೆಗೆ ನಮಗೆ ಸಹಕಾರ ನೀಡಿದ್ದಾರೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
ಕೇಂದ್ರ ಕಳೆದ ಎರಡು ತಿಂಗಳಿಂದ ಎರಡು ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಪೂರೈಕೆ ಮಾಡಬೇಕಿತ್ತು. ಆದರೆ ಕೇಂದ್ರದಿಂದ ರಾಜ್ಯಕ್ಕೆ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಾಸವಾದ ಹಿನ್ನಲೆಯಲ್ಲಿ ನಮ್ಮ ರೈತರಿಗೆ ಸಮಸ್ಯೆ ಉಂಟಾಯಿತು ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ಕೇಂದ್ರ ಸರ್ಕಾರ ಸಮರ್ಪಕವಾಗಿ ಗೊಬ್ಬರ ಪೂರೈಕೆ ಮಾಡಿದ್ರೆ ರಸಗೊಬ್ಬರ ಸಮಸ್ಯೆ ಪರಿಹಾರ ಆಗುತ್ತೆ. ರೈತರಿಗೆ ಆದ ರಸಗೊಬ್ಬರ ಕೊರತೆ ಸಮಸ್ಯೆಗೆ ಕೇಂದ್ರವೇ ನೇರ ಕಾರಣ. ಕೇಂದ್ರ ಸರ್ಕಾರವೇ ಇದಕ್ಕೆ ಉತ್ತರ ಕೊಡಬೇಕು ಎಂದು ಚಲುವರಾಯಸ್ವಾಮಿ ತಿಳಿಸಿದರು.
ಕೇಂದ್ರ ನಮಗೆ ಕೊಟ್ಟಿರೋ ಅಲೋಕೇಷನ್ ನಷ್ಟು ರಸಗೊಬ್ಬರ ಕೊಟ್ಟರೆ ಸಾಕು ನಮ್ಮ ರಾಜ್ಯದ ರೈತರ ಸಮಸ್ಯೆ ಪರಿಹಾರ ಆಗುತ್ತೆ ಎಂದು ಸಚಿವ ಚಲುವರಾಯಸ್ವಾಮಿ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಪ್ರಶ್ನೆಗೆ ಉತ್ತರಿಸಿದರು..