ಬೆಂಗಳೂರು: RCB ತಂಡದ ವಿಜಯೋತ್ಸವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ದುರಂತದಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ಭವಿಷ್ಯದಲ್ಲಿಯೇ ಅಂತಹ ಘಟನೆಗಳು ಮರುಕಳಿಸದಂತೆ ಮಂಗಳವಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಎಂ.ಎ. ಸಲೀಂ ಅವರು ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಭಾನುವಾರಗಳು, ಮೆರವಣಿಗೆಗಳು, ಪ್ರತಿಭಟನೆಗಳು, ಕ್ರೀಡಾ ಕೂಟಗಳು ಮುಂತಾದವುಗಳಲ್ಲಿ ಸಾರ್ವಜನಿಕರ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ರೂಪಿಸಲಾಗಿದೆ ಎಂದು ತಿಳಿಸಿದರು.
ಸಮಾರಂಭಕ್ಕೂ ಮುನ್ನ ಸ್ಥಳ ಪರಿಶೀಲನೆ, ಆಯೋಜಕರ ಜತೆ ಯೋಜನೆ ರೂಪಿಸುವುದು ಕಡ್ಡಾಯವಾಗಿದ್ದು, ಸ್ಥಳದ ಸಾಮರ್ಥ್ಯ, ತುರ್ತು ನಿರ್ಗಮನ ಮಾರ್ಗ, ತಂತ್ರಜ್ಞಾನ ಬಳಕೆ ಸಾಧ್ಯತೆಗಳ ವಿಶ್ಲೇಷಣೆ ಅಗತ್ಯವಾಗಿದೆ.
ಮುಖ್ಯ ಅಂಶಗಳು ಹೀಗಿವೆ:
- ತರಬೇತಿ ಪಡೆದ ಸಿಬ್ಬಂದಿ ಪ್ರವೇಶ ದ್ವಾರದಲ್ಲಿ ನಿಯೋಜನೆ
- QR ಕೋಡ್, ಬಯೋಮೆಟ್ರಿಕ್ ತಂತ್ರಜ್ಞಾನ ಬಳಕೆ
- ಪುರುಷ, ಮಹಿಳೆ, ವೃದ್ಧ, ಅಂಗವಿಕಲರಿಗೆ ಪ್ರತ್ಯೇಕ ದ್ವಾರ
- ತುರ್ತು ನಿರ್ಗಮನದ ಮಾರ್ಗಗಳ ಗುರುತು, ಸ್ಪೀಕರ್ ಮೂಲಕ ಸೂಚನೆ ವ್ಯವಸ್ಥೆ
- ಅಂಬುಲೆನ್ಸ್ ಪಾರ್ಕಿಂಗ್ ಸೇರಿ ವೈದ್ಯಕೀಯ ನೆರವು ಖಚಿತಪಡಿಸಬೇಕು
- ಸಿಮ್ಯುಲೇಷನ್ ಡ್ರಿಲ್‌ಗಳ ಮೂಲಕ ತುರ್ತು ಪರಿಸ್ಥಿತಿ ತಯಾರಿ
- ಬಲ ಉಪಯೋಗಿಸುವ ಮುನ್ನ ಮೂರು ಬಾರಿ ಎಚ್ಚರಿಕೆ ಕಡ್ಡಾಯ
- ಎಲ್ಲ ಕ್ರಮಗಳನ್ನು ಆಡಿಯೋ/ವಿಡಿಯೋ ದಾಖಲೆ ಮಾಡಬೇಕು
ಈ ಎಸ್‌ಒಪಿ ಮೂಲಕ ಸಾರ್ವಜನಿಕರ ಭದ್ರತೆ, ಕಾನೂನು ಸುವ್ಯವಸ್ಥೆ ಹಾಗೂ ಮಾನವೀಯ ಘನತೆಯನ್ನು ಎತ್ತಿಹಿಡಿಯಲು ಕ್ರಮಕೈಗೊಳ್ಳಲಾಗಿದೆ.