ಬೆಂಗಳೂರು: ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕರ್ನಾಟಕ – ಭಾರತ್ ಗೌರವ್ ಕಾಶಿ ದರ್ಶನ ರೈಲು ಪ್ರವಾಸದ ಎರಡನೇ ಟ್ರಿಪ್ ನ ಯಾತ್ರಾರ್ಥಿಗಳು ಬುಧವಾರ 23 ನೇ ನವೆಂಬರ್ 2022 ರಂದು ಮಧ್ಯಾಹ್ನ ಯಾತ್ರೆಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಯಾತ್ರೆಯ ಯಾತ್ರಾರ್ಥಿಗಳನ್ನು ಬಿಳ್ಕೊಡುಗೆ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಅ ಜೊಲ್ಲೆ ಅವರು ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀಮತಿ ತಾರಾಅನೂರಾಧ, ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರಾದ ಡಾ. ತೇಜಸ್ವಿನಿ ಅನಂತಕುಮಾರ್, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದರಾದ ಪಿ.ಸಿ ಮೋಹನ್ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನೇಶ್ ಗುಂಡುರಾವ್ ಉಪಸ್ಥಿತರಿರಲಿದ್ದಾರೆ.



















































