ಬೆಂಗಳೂರು: ಕರ್ನಾಟಕದಲ್ಲಿ ಖಾಸಗಿ ಮತ್ತು ಸಾರ್ವಜನಿಕ ವಲಯದ ಕೈಗಾರಿಕೆಗಳು ತಮ್ಮ ಕಂಪನಿಯ ಹೆಸರು ಮತ್ತು ಬಳಕೆಯ ಸೂಚನೆಗಳನ್ನು ಕನ್ನಡ ಭಾಷೆಯಲ್ಲಿ ಮುದ್ರಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ.
ಸಿಎಂ ಆದೇಶದ ಹಿನ್ನೆಲೆಯಲ್ಲಿ ಫೆಬ್ರವರಿ 15 ರಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ (ಸೇವೆಗಳು ಮತ್ತು ಸಮನ್ವಯ) ಅಧೀನ ಕಾರ್ಯದರ್ಶಿ ಕೆ. ಉಮಾದೇವಿ ಅವರು ಸುತ್ತೋಲೆಯನ್ನು ಹೊರಡಿಸಿದ್ದಾರೆ.
ಸುತ್ತೋಲೆಯಲ್ಲಿ, ಕರ್ನಾಟಕ ಸರ್ಕಾರವು ಮಾರ್ಚ್ 12, 2024 ರಂದು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ, 2022 ನ್ನು ಅನಿಷ್ಠಾನಕ್ಕೆ ತಂದಿದೆ. ಅದರಂತೆ ಭಾಷೆಯ ಬೆಳವಣಿಗೆಗೆ ಉತ್ಪಾದನೆ, ಮಾರುಕಟ್ಟೆ ಮತ್ತು ವಹಿವಾಟುಗಳನ್ನು ಸ್ಥಳೀಯ ಭಾಷೆಯಲ್ಲಿ ನಡೆಸುವುದು ಅತ್ಯಗತ್ಯ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಕಾಯ್ದೆಯ ಸೆಕ್ಷನ್ 17 (7) ರ ಅಡಿಯಲ್ಲಿ ರಾಜ್ಯದೊಳಗೆ ಉತ್ಪಾದಿಸುವ ಮತ್ತು ಮಾರಾಟ ಮಾಡುವ ಎಲ್ಲಾ ಕೈಗಾರಿಕಾ ಮತ್ತು ಇತರ ಗ್ರಾಹಕ ಉತ್ಪನ್ನಗಳು ಇತರ ಭಾಷೆಗಳೊಂದಿಗೆ ತಮ್ಮ ಹೆಸರು ಮತ್ತು ಬಳಕೆದಾರ ಸೂಚನೆಗಳನ್ನು ಕನ್ನಡದಲ್ಲಿ ಮುದ್ರಿಸಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಕನ್ನಡ ಸಮಗ್ರ ಅಭಿವೃದ್ಧಿ ಕಾಯ್ದೆ, 2022 ರ ಸೆಕ್ಷನ್ 9 ರ ಪ್ರಕಾರ, ಎಲ್ಲಾ ಸರ್ಕಾರಿ ಮತ್ತು ಖಾಸಗಿ ವಲಯದ ಕೈಗಾರಿಕಾ ಮತ್ತು ಗ್ರಾಹಕ-ಆಧಾರಿತ ವಸ್ತುಗಳ ತಯಾರಕರು ಹೆಸರು ಮತ್ತು ಬಳಕೆದಾರ ಸೂಚನೆಗಳನ್ನು ಕನ್ನಡ ಭಾಷೆಯಲ್ಲಿ ಮುದ್ರಿಸುವುದನ್ನು ಮೇಲ್ವಿಚಾರಣೆ ಮಾಡಬೇಕು ಮತ್ತು ಖಚಿತಪಡಿಸಿಕೊಳ್ಳುವಂತೆ ಸಮಬಂಧಪಟ್ಟ ಇಲಾಖೆಗಳಿಗೆ ಈ ಸುತ್ತೋಲೆ ಮೂಲಕ ಸೂಚನೆ ನೀಡಲಾಗಿದೆ.
ಈ ಸಂಬಂಧ ಸುತ್ತೋಲೆಯನ್ನು ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಉಪ ಆಯುಕ್ತರು, ಎಲ್ಲಾ ನಗರ ನಿಗಮಗಳ ಆಯುಕ್ತರು, ಎಲ್ಲಾ ಜಿಲ್ಲಾ ಪಂಚಾಯತ್‌ಗಳ ಸಿಇಒಗಳು, ಬೆಂಗಳೂರಿನಲ್ಲಿರುವ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಕೈಗಾರಿಕಾ ಅಭಿವೃದ್ಧಿ ಆಯುಕ್ತರು ಮತ್ತು ಎಂಎಸ್‌ಎಂಇಗಳ ನಿರ್ದೇಶಕರಿಗೆ ಕಳುಹಿಸಲಾಗಿದೆ ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ.