ಮಂಗಳೂರು: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮಂಗಳೂರು ಬಳಿಯ ಪ್ರಸಿದ್ಧ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ ಮತ್ತು ಉಡುಪಿ ಜಿಲ್ಲೆಯ ಕಾಪುವಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ತಮ್ಮ ಸಹೋದರಿ ಬಾಲಿವುಡ್ ನಟಿ ಶಮಿತಾ ಶೆಟ್ಟಿ ಸೇರಿದಂತೆ ಕುಟುಂಬದೊಂದಿಗೆ ಭೇಟಿ ನೀಡಿ ಎಲ್ಲರ ಕುತೂಹಲದ ಕೇಂದ್ರಬಿಂದುವಾದರು.
ಶುಕ್ರವಾರ ಅವರು ಈ ಕ್ಷೇತ್ರ ಪರ್ಯಟನೆ ಕೈಗೊಂಡಿದ್ದು, ಈ ಕುರಿತ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ದೇವಾಲಯ ಭೇಟಿ ಸಮಯದಲ್ಲಿ ಶಿಲ್ಪಾ ಶೆಟ್ಟಿ, ಅವರ ತಾಯಿ ಸುನಂದಾ ಶೆಟ್ಟಿ, ಅವರ ಮಕ್ಕಳಾದ ವಿಯಾನ್ ಮತ್ತು ಸಮಿಶಾ ಮತ್ತು ಅವರ ಸಹೋದರಿ ಶಮಿತಾ ಶೆಟ್ಟಿ ಪ್ರದರ್ಶಿಸಿದ ಸರಳತೆ ಮತ್ತು ಭಕ್ತಿ ಅಭಿಮಾನಿಗಳು ಮತ್ತು ಸ್ಥಳೀಯರ ಹೃದಯಗಳನ್ನು ಗೆದ್ದಿದೆ. ಶಿಲ್ಪಾ ಶೆಟ್ಟಿ ಕುಟುಂಬವು ಮೊದಲು ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿತು.
ಚೂಡಿದಾರ್ ಧರಿಸಿದ್ದ ನಟಿ ತನ್ನ ನೇಟಿವಿಟಿಗೆ ತಕ್ಕಂತೆ ಮಲ್ಲಿಗೆ ಹೂವು ಮುಡಿದು ಪಕ್ಕ ತುಳು ಸಂಪ್ರದಾಯ ಅನುಸರಿಸಿದರು. ಪೂಜಾ ಸಾಮಗ್ರಿಗಳೊಂದಿಗೆ ತಟ್ಟೆಯನ್ನು ಹೊತ್ತುಕೊಂಡು ದೇವಾಲಯವನ್ನು ಪ್ರವೇಶಿಸಿದ ವೈಖರಿಯೂ ಗಮನಸೆಳೆಯಿತು.
ನಂತರ, ಉಡುಪಿ ಜಿಲ್ಲೆಯ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ, ಅಷ್ಟಬಂಧ ಬ್ರಹ್ಮಕಲಶೋತ್ಸವ ಕೈಂಕರ್ಯಕ್ಕೆ ಸಾಕ್ಷಿಯಾದರು. ಮಾರಿಯಮ್ಮ ದೇವಿಯ ದರ್ಶನ ಪಡೆದ ನಂತರ, ಶಿಲ್ಪಾ ಶೆಟ್ಟಿ ಅವರನ್ನು ದೇವಾಲಯದ ಆಡಳಿತ ಮಂಡಳಿ ಸನ್ಮಾನಿಸಿತು.
ಭೇಟಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಲ್ಪಾ ಶೆಟ್ಟಿ, ದೇವಾಲಯದ ವಾಸ್ತುಶಿಲ್ಪ ಮತ್ತು ಸಂಕೀರ್ಣವಾದ ಮರದ ಕೆತ್ತನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ದೇವಾಲಯದ ನವೀಕರಣ ಪೂರ್ಣಗೊಂಡ ನಂತರ,ಮತ್ತೆ ಭೇಟಿ ನೀಡುತ್ತೇನೆ ಎಂದು ಅವರು ಹೇಳಿದರು.