ಕರೂರ್: ನಟ-ರಾಜಕಾರಣಿ ವಿಜಯ್ ಅವರ ರಾಜಕೀಯ ರ್ಯಾಲಿಯಲ್ಲಿ ನಡೆದ ಭೀಕರ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಕರೂರ್ ಪಟ್ಟಣ ಪೊಲೀಸರು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಕರೂರ್ ಪಶ್ಚಿಮ ಜಿಲ್ಲಾ ಕಾರ್ಯದರ್ಶಿ ವಿ.ಪಿ. ಮಥಿಯಜಗನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಶನಿವಾರ ನಡೆದ ಈ ದುರಂತದಲ್ಲಿ 39 ಜನರು ಸಾವನ್ನಪ್ಪಿದ್ದು, 83 ಜನರು ಗಾಯಗೊಂಡಿದ್ದಾರೆ. ಜನಸಂದಣಿ ನಿಯಂತ್ರಣ ಮತ್ತು ಭದ್ರತಾ ಮಾನದಂಡಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆಯ ನಾಲ್ಕು ವಿಭಾಗಗಳಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖಾಧಿಕಾರಿಗಳು ಇನ್ನೂ ಇತರರ ಲೋಪಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. “ತನಿಖೆ ಮುಂದುವರಿಯುತ್ತಿದೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು,” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬೆಳಗ್ಗಿನಿಂದಲೇ ಸಾವಿರಾರು ಮಂದಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಬಿಸಿಲಿನಲ್ಲಿ ನಿಂತಿದ್ದವರಿಗೆ ಆಹಾರ–ನೀರು ಒದಗಿಸಲ್ಪಟ್ಟರೂ, ಸಂಜೆ ವಿಜಯ್ ಆಗಮಿಸುವ ಸುದ್ದಿ ಹರಿದಂತೆ ಜನದಟ್ಟಣೆ ಹೆಚ್ಚಿತು. ಅಬ್ಬರದ ಗುಂಪಿನಲ್ಲಿ ಹಲವರು ಮೂರ್ಛೆ ಹೋಗಿ, ನಂತರ ಮಾರಕ ಕಾಲ್ತುಳಿತ ಸಂಭವಿಸಿತು.
ಮೃತರ ಕುಟುಂಬಗಳಿಗೆ ತಲಾ ₹10 ಲಕ್ಷ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ₹1 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘೋಷಿಸಿದ್ದಾರೆ. ತಡರಾತ್ರಿ ಸ್ಥಳಕ್ಕೆ ತೆರಳಿ ಕುಟುಂಬಗಳನ್ನು ಭೇಟಿಯಾದ ಅವರು, ನಿವೃತ್ತ ಹೈಕೋರ್ಟ್ ನ್ಯಾಯಾಧೀಶೆ ಅರುಣಾ ಜಗದೀಶನ್ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಲು ಆದೇಶಿಸಿದ್ದಾರೆ. ಇಂತಹ ಘಟನೆ ಮರುಕಳಿಸಬಾರದು. ಹೊಣೆಗಾರರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಿಎಂ ಸ್ಟಾಲಿನ್ ಹೇಳಿದರು.
ಈ ಮಧ್ಯೆ, ವಿದುತಲೈ ಚಿರುತೈಗಲ್ ಕಚ್ಚಿ (ವಿಚಿಕ) ನಾಯಕ ಥೋಲ್. ತಿರುಮಾವಲವನ್, “ಇದು ಊಹಿಸಲಾಗದ ಮಾನವ ದುರಂತ. ಸಂತ್ರಸ್ತರ ಕುಟುಂಬಗಳಿಗೆ ಪರಿಹಾರವನ್ನು ಕನಿಷ್ಠ ₹50 ಲಕ್ಷಕ್ಕೆ ಹೆಚ್ಚಿಸಬೇಕು,” ಎಂದು ಆಗ್ರಹಿಸಿದ್ದಾರೆ.