ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ತಾವು ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಕರ್ನಾಟಕದಲ್ಲಿ ಎಸ್ಐಆರ್ ಪ್ರಕ್ರಿಯೆ ಸರಿಯಾಗಿದೆ ಎಂಬ ಅರ್ಥದಲ್ಲಿ ತಾವು ಮಾತನಾಡಿಲ್ಲ. ಬದಲಾಗಿ, ಫಾರಂ–7 ಮೂಲಕ ಕಾಂಗ್ರೆಸ್ ಬೆಂಬಲಿಗ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವ ಪ್ರಯತ್ನವನ್ನು ವಿಫಲಗೊಳಿಸಿರುವುದರ ಕುರಿತು ಹೇಳಿದ್ದಾಗಿ ತಿಳಿಸಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಇಂತಹ ಪ್ರಯತ್ನಗಳನ್ನು ತಡೆಯಲು ಸಾಧ್ಯವಾಗಿದೆ. ರಾಷ್ಟ್ರ ನಾಯಕ ರಾಹುಲ್ ಗಾಂಧಿ ಅವರ ಹೋರಾಟ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಈ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂಬುದು ತಮ್ಮ ಹೇಳಿಕೆಯ ಉದ್ದೇಶವಾಗಿತ್ತು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಫಾರಂ–7 ಮೂಲಕ ಅರ್ಹ ಮತದಾರರ ಹೆಸರುಗಳನ್ನು ಅಳಿಸುವ ಪ್ರಯತ್ನವನ್ನು ತಡೆಯುವ ಹೋರಾಟಕ್ಕೆ ಬೆಳಗಾವಿ ಜಿಲ್ಲೆಯಿಂದಲೇ ಚಾಲನೆ ನೀಡಲಾಗಿತ್ತು. ಈ ಹೋರಾಟವನ್ನು ಯಶಸ್ವಿಯಾಗಿ ಎದುರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅರ್ಹ ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನದ ವಿರುದ್ಧ ತಮ್ಮ ನಿಲುವು ಮೊದಲಿನಿಂದಲೂ ದೃಢವಾಗಿದೆ ಎಂದು ಹೇಳಿರುವ ಜಾರಕಿಹೊಳಿ, ಮತದಾರರ ಪಟ್ಟಿಯಿಂದ ಅರ್ಹರ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕುವುದನ್ನು ಬಲವಾಗಿ ವಿರೋಧಿಸುವುದಾಗಿ ಪುನರುಚ್ಚರಿಸಿದ್ದಾರೆ.
ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಮತದಾನದ ಹಕ್ಕಿನ ರಕ್ಷಣೆಗಾಗಿ ರಾಹುಲ್ ಗಾಂಧಿ ಅವರೊಂದಿಗೆ ದೃಢವಾಗಿ ನಿಲ್ಲುವುದಾಗಿ ತಿಳಿಸಿರುವ ಅವರು, ತಮ್ಮ ಹೇಳಿಕೆಯ ನೈಜ ಆಶಯವನ್ನು ತಪ್ಪಾಗಿ ಅರ್ಥೈಸದೆ ಗ್ರಹಿಸಬೇಕು ಎಂದು ಮನವಿ ಮಾಡಿದ್ದಾರೆ.














































































